ರಾಯಚೂರು: ಸರ್ಕಾರ ಜಾರಿಗೊಳಿಸಿದ ನೂತನ ಮೋಟಾರ್ ವಾಹನ ಕಾಯ್ದೆಯಿಂದ ಬಡ, ಮಧ್ಯಮ ವರ್ಗದವರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಭಾರೀ ದಂಡ ಶುಲ್ಕ ವಸೂಲಿಗೆ ಕಡಿವಾಣ ಹಾಕಬೇಕು ಎಂದು ಅಂಬೇಡ್ಕರ್ ಸೇನೆ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದ ಸದಸ್ಯರು, ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯಿಂದ ನಿಯಮ ಉಲ್ಲಂಘಿಸಿದ ಸವಾರರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನ, ಕೂಲಿ ಕಾರ್ಮಿಕರು, ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ಗ್ರಾಮೀಣ ಭಾಗದಿಂದ ನಿತ್ಯ ಸಾವಿರಾರು ಜನರು ಕೂಲಿ ಕೆಲಸಕ್ಕೆ, ವ್ಯಾಪಾರ ವಹಿವಾಟಿಗೆ ಬರುತ್ತಾರೆ. ಅವರಿಗೆ ಸಾವಿರಾರು ರೂ. ದಂಡ ಭರಿಸುವ ಶಕ್ತಿ ಇರುವುದಿಲ್ಲ. ಏಕಾಏಕಿ ಸಾವಿರಾರು ರೂ. ದಂಡ ಹಾಕಿದರೆ ಅವರು ಏನು ಮಾಡಲು ಸಾಧ್ಯ. ಈಗಾಗಲೇ ಸತತ ಬರದಿಂದ ಸಾಕಷ್ಟು ತೊಂದರೆಯಲ್ಲಿರುವ ಜಿಲ್ಲೆಯ ಜನರಿಗೆ ಸರ್ಕಾರ ಈ ರೀತಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕೆಲಸ ಸಿಗದೆ ಗ್ರಾಮೀಣ ಭಾಗದ ಜನ ಗುಳೆ ಹೋಗುತ್ತಿದ್ದಾರೆ. ಇರುವವರು ಹೇಗೋ ಕಷ್ಟಪಟ್ಟು ಜೀವನ ದೂಡುತ್ತಿದ್ದಾರೆ. ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ದುಬಾರಿ ದಂಡ ವಿಧಿಸುವುದು ಸರಿಯಲ್ಲ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸೇನೆ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಮಹೇಶಕುಮಾರ, ಅಮರಯ್ಯಸ್ವಾಮಿ, ವೆಂಕಟೇಶ ದಿನ್ನಿ, ಬಂದೆನವಾಜ್, ಸಂತೋಷ, ಮುತ್ತುರಾಜ, ಕುಮಾರಸ್ವಾಮಿ ಇತರರು ಇದ್ದರು.