Advertisement

ಜಲಮೂಲ ಪುನಶ್ಚೇತನ ವಿನಃ ಕೃಷಿಗಿಲ್ಲ ಭವಿಷ್ಯ

04:01 PM Nov 23, 2019 | Naveen |

ರಾಯಚೂರು: ಈಗಾಗಲೇ ಸಕಾಲಕ್ಕೆ ಮಳೆ ಇಲ್ಲದೇ ಕೃಷಿ ವಲಯ ದುರ್ಬಲಗೊಂಡಿದ್ದು, ಜಲಮೂಲಗಳಿಗೆ ಪುನಶ್ಚೇತನ ನೀಡದಿದ್ದಲ್ಲಿ ಕೃಷಿಗೆ ಭವಿಷ್ಯವೇ ಇರುವುದಿಲ್ಲ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಡಾ| ಎಚ್‌.ಎಮ್‌. ಮಹೇಶ್ವರಯ್ಯ ಎಚ್ಚರಿಸಿದರು.

Advertisement

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಯೇ ನೀರೇ ಜೀವಾಳ. ಆದರೆ, ಇಂದು ನೀರಿನ ಅಭಾವ ಹೆಚ್ಚಾಗಿ ಕಾಡುತ್ತಿದ್ದು, ಕಾಲಕಾಲಕ್ಕೆ ಮಳೆ ಇಲ್ಲದೇ ರೈತಾಪಿ ವರ್ಗ ಕಂಗೆಟ್ಟಿದೆ. ಅದಕ್ಕೆ ಕೆರೆ ಕುಂಟೆಗಳ ಅವಸಾನವೇ ಕಾರಣ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು. ಕರ್ನಾಟಕದಲ್ಲಿ 24 ಸಾವಿರ ಕೆರೆಗಳಿದ್ದವು. ಆದರೆ, ಇದೀಗ ಅವುಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದೇ ಅದಕ್ಕೆ ಜೀವಂತ ಉದಾಹರಣೆ ಎಂದರು.

ಈಗ ಅಳಿದುಳಿದ ಕೆರೆ ಮತ್ತು ಬಾವಿಗಳಲ್ಲಿ ಹೂಳು ತೆಗೆಯುವ ಕೆಲಸವಾಗಬೇಕು. ಕೆರೆಗಳನ್ನು ನಿರ್ಮಿಸುವುದರ ಜೊತೆಗೆ ಪುನಃಶ್ಚೇತನಗೊಳಿಸಬೇಕು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 45
ಎಕರೆ ಭೂ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗಿದೆ. ಇದು ಪ್ರಾಣಿ ಪಕ್ಷಿಗಳಿಗೆ ನೆರವಾಗಿದೆ. ಸಂಪನ್ಮೂಲ ಬಳಕೆ ಹೇಗೆ ನಮ್ಮ ಹಕ್ಕಾಗಿದೆಯೋ, ಅದನ್ನು ರಕ್ಷಿಸಿ ವೃದ್ಧಿಸುವುದು ಕೂಡ ನಮ್ಮ ಹಕ್ಕಾಗಿದೆ. ಗಿಡ ಮರಗಳನ್ನು ಬೆಳೆಸಿದರೆ ಉತ್ತಮ ಮಳೆ ಬೆಳೆಯಾಗಿ ಜೀವ ಸಂಕುಲ ಉಳಿಯಲಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗ ಎಲ್ಲ ವಿಚಾರದಲ್ಲೂ ಶ್ರೇಷ್ಠವಾಗಿದೆ. ಈ ಭಾಗದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕಳೆದೊಂದು ದಶಕದಲ್ಲಿ ಮಾಡಿದ ಸಾಧನೆ ಶ್ಲಾಘನೀಯ. ಒಂದು ವಿವಿ ಉನ್ನತ ಸ್ಥಾನಕ್ಕೇರಲು ಆಸಕ್ತ ವಿದ್ಯಾರ್ಥಿಗಳು, ವಿಸ್ತ?ತ ಜ್ಞಾನ ಪಡೆದ ಅಧ್ಯಾಪಕ ವೃಂದ ಬೇಕು. ಅಂಥ ವಾತಾವರಣ ಇಲ್ಲಿ ಕಂಡು ಬರುತ್ತಿದೆ ಎಂದು ಬಣ್ಣಿಸಿದರು.

ಸಾಧನೆಗೈದ ವಿವಿಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು .ಪ್ರಸಕ್ತ ಸಾಲಿನಲ್ಲಿ ಕೃಷಿ ವಿಶ್ವ ವಿದ್ಯಾಲಯದ ಕಿರುಹೊತ್ತಿಗೆಗಳನ್ನು ಬಿಡುಗಡೆಗೊಳಿಸಲಾಯಿತು.

Advertisement

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|ಕೆ.ಎನ್‌ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್‌ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ಧಪ್ಪ ಭಂಡಾರಿ, ವೀರನಗೌಡ ಪರಸರೆಡ್ಡಿ, ಡಾ|ಎಸ್‌.ಕೆ.ಮೇಟಿ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next