ರಾಯಚೂರು: ಮನೆ ಬಾಗಿಲು ಮುರಿದು ನುಗ್ಗಿದ ದುಷ್ಕರ್ಮಿಗಳು ಮನೆಯವರನ್ನು ಕಟ್ಟಿ ಹಾಕಿ ಚಿನ್ನಾಭರಣ, ಬೆಳ್ಳಿ, ಎರಡು ಲಕ್ಷ ರೂ. ನಗದು ದರೋಡೆ ಮಾಡಿದ ಘಟನೆ ರವಿವಾರ (ಸೆ.15) ಬೆಳಗಿನ ಜಾವ ನಡೆದಿದೆ.
ನಗರದ ಶ್ರೀ ಲಕ್ಷ್ಮಿ ನರಸಿಂಹ ಬಡಾವಣೆಯ ಬಸನಗೌಡ ಎಂಬುವವರ ಮನೆಯಲ್ಲಿ ದರೋಡೆ ಘಟನೆ ನಡೆದಿದೆ.
ಚಾಕು ತೋರಿಸಿ ಬೆದರಿಸಿದ ದರೋಡೆಕೋರರು 22 ತೊಲೆ ಬಂಗಾರ, 2 ಕೆಜಿ ಬೆಳ್ಳಿ, ಎರಡು ಲಕ್ಷ ನಗದು ದರೋಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕೃತ್ಯ ಪೂರ್ವ ನಿಯೋಜಿತವಾಗಿರಬಹುದು ಎಂದು ಅಂದಾಜಿಸಲಾಗಿದೆ.
ದರೋಡೆಕೋರರ ಗ್ಯಾಂಗ್ ಕಪ್ಪು ಬಟ್ಟೆ ಧರಿಸಿ ದರೋಡೆಗೆ ಇಳಿದಿದೆ. ದರೋಡೆಗೆ ನಗ್ಗುವ ಮುನ್ನ ಆ ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ಹೊರಗಿಂದ ಲಾಕ್ ಮಾಡಿದ್ದಾರೆ. ಅಲ್ಲದೆ ಆ ರಸ್ತೆಯಲ್ಲಿನ ಕಂಬಗಳ, ಮನೆಗಳ ಮುಂದಿನ ಲೈಟ್ ಗಳನ್ನು ಆಫ್ ಮಾಡಿದ್ದಾರೆ. ದರೋಡೆಕೋರರ ಈ ಒಂದು ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪಶ್ಚಿಮ ಠಾಣೆ ಪೊಲೀಸರು ಸ್ಥಳದಲ್ಲಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದಲೂ ಶೊಧಕಾರ್ಯ ನಡೆದಿದ್ದು, ಈ ಒಂದು ಘಟನೆಯಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.