ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಮತದಾರ ಪ್ರತೀ ಬಾರಿಯೂ ಬದಲಾವಣೆ ಬಯಸುವುದು ವಿಶೇಷ. ಕಳೆದ ನಾಲ್ಕು ದಶಕಗಳಿಂದ ಇಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆದ್ದಿಲ್ಲ. ಒಬ್ಬ ಅಭ್ಯರ್ಥಿ ನಿರಂತರ ಎರಡು ಬಾರಿ ಗೆದ್ದಿರುವ ನಿದರ್ಶನಗಳಿಲ್ಲ. ಎರಡನೇ ಬಾರಿ ಸ್ಪ ರ್ಧಿಸಿದರೂ ಸೋಲುವ ಸಾಧ್ಯತೆಗಳೇ ಹೆಚ್ಚು.
ಹೀಗಾಗಿ ಇಲ್ಲಿ ಎರಡನೇ ಬಾರಿ ಸ್ಪರ್ಧಿಸಲು ಆಕಾಂಕ್ಷಿಗಳಿಗೆ ಆತಂಕವಿರುತ್ತದೆ. 1978 ಮತ್ತು 1983ರಲ್ಲಿ ಸುಧೀಂದ್ರ ರಾವ್ ಕಸಬೆ ಎನ್ನುವವರು ಗೆದ್ದಿದ್ದರು. ಸಚಿವರು ಆಗಿದ್ದರು. ಅದಾದ ಬಳಿಕ ಇಲ್ಲಿ ಯಾವುದೇ ಅಭ್ಯರ್ಥಿ ಎರಡನೇ ಬಾರಿಗೆ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಹಾಲಿ ಶಾಸಕರಿಗೆ ಸಾಮಾನ್ಯವಾಗಿ ಸುಲಭಕ್ಕೆ ಟಿಕೆಟ್ ಸಿಗುವುದರಿಂದ ಎರಡನೇ ಬಾರಿಗೆ ಸ್ಪರ್ಧಿಸುತ್ತಾರೆ. ಆದರೆ ಗೆಲುವು ಸಾಧ್ಯವಾಗುವುದಿಲ್ಲ. ಈಗಿರುವ ಸಂಸದ ರಾಜಾ ಅಮರೇಶ್ವರ ನಾಯಕ 1999ರಲ್ಲಿ ಹಿಂದೆ ಇದೇ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದರು.
ಇದು ಮೊದಲು ರಾಯಚೂರು-2 ಕ್ಷೇತ್ರವಾಗಿತ್ತು. ನಂತರ ಕಲ್ಮಲ ಕ್ಷೇತ್ರವಾಯಿತು. ಅನಂತರ ಇದನ್ನು ರಾಯಚೂರು ಗ್ರಾಮೀಣ ಎಂದು ಬದಲಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಹಾಲಿ ಕಾಂಗ್ರೆಸ್ ಶಾಸಕ ದದ್ದಲ್ ಬಸನಗೌಡ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದೇ ಕ್ಷೇತ್ರದಿಂದ 2013ರಲ್ಲಿ ಗೆದ್ದಿದ್ದ ಬಿಜೆಪಿ ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.