ರಾಯಚೂರು: ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಅಧಿಕಾರಿಗಳು ನೀಡಿದ ವರದಿಯಲ್ಲೇ ಗೊಂದಲವಿದೆ. ಹೀಗಾಗಿ ಮರುಸಮೀಕ್ಷೆ ನಡೆಸಿ ನಿಖರವಾದ ಮಾಹಿತಿ ಒಳಗೊಂಡ ವರದಿ ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ| ಆಂಥೋನಿ ಸೆಬಾಸ್ಟಿಯನ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಜಲ ನಿರ್ಮಲ ಸಭಾಂಗಣದಲ್ಲಿ ಮಂಗಳವಾರ ಆರ್‌ಟಿಇ ಹಾಗೂ ಶಾಲೆ ಬಿಟ್ಟ ಮಕ್ಕಳ ಕುರಿತು ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ 3.80 ಲಕ್ಷ ಮಕ್ಕಳಿದ್ದು, ಬಾಲಕಾರ್ಮಿಕ ಯೋಜನೆ ಪ್ರಕಾರ ಎರಡು ಸಾವಿರ ಮಕ್ಕಳು ಹಾಗೂ ಶಿಕ್ಷಣ ಇಲಾಖೆ ವರದಿಯಂತೆ 502 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದರಲ್ಲಿ ಗೊಂದಲ ಕಂಡು ಬರುತ್ತಿದೆ. ಹೀಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮತ್ತೂಮ್ಮೆ ಸಮೀಕ್ಷೆ ನಡೆಸಿ ನಿಖರ ಸಂಖ್ಯೆ ದಾಖಲಿಸುವಂತೆ ಸೂಚಿಸಿದರು.
ಒಂದು ತಿಂಗಳೊಳಗೆ ಆಯೋಗಕ್ಕೆ ಸಮೀಕ್ಷಾ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಾಕೀತು ಮಾಡಿದರು. ಆಯೋಗದ ಸದಸ್ಯ ಪರಶುರಾಮ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ ಹೆಚ್ಚು ಮಕ್ಕಳು ವಲಸೆ ಹೋಗುತ್ತಿದ್ದಾರೆ. ಜೀತ ಪದ್ಧತಿಯೋ, ಬಾಲ್ಯ ವಿವಾಹವೋ ಅಥವಾ ನಾಪತ್ತೆ ಪ್ರಕರಣಗಳ್ಳೋ ಎಂಬ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಿ. ಈ ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ನಿಖರ ಮಾಹಿತಿ ಪಡೆಯಬೇಕು. ಮಾಹಿತಿ ತಪ್ಪಾಗಿದ್ದಲ್ಲಿ ಸಂಬಂ ಧಿಸಿದ ಶಿಕ್ಷಕರನ್ನೆ ಹೊಣೆ ಮಾಡುವಂತೆ ಒತ್ತಾಯಿಸಿದರು.
ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಆಟದ ಮೈದಾನ, ಶೌಚಗೃಹ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು. ಮಾನವೀಯತೆಯಿಂದ ಕೆಲಸ ಮಾಡಿದರೆ ಇವೆಲ್ಲವೂ ಸಾಧ್ಯ. ಆದ್ದರಿಂದ ಮಾನವೀಯ ಮೌಲ್ಯದಿಂದ ಕರ್ತವ್ಯ ನಿರ್ವಹಿಸುವಂತೆ ಸೆಬಾಸ್ಟಿಯನ್ ತಿಳಿಸಿದರು.
ಆರ್‌ಟಿಇನಡಿ ಜಿಲ್ಲೆಗೆ 12 ಕೋಟಿ ರೂ. ಅನುದಾನ ನೀಡಿದ್ದು, ಇನ್ನೂ 80 ಲಕ್ಷ ರೂ. ಬಾಕಿ ಉಳಿದಿದೆ ಎಂದು ಡಿಡಿಪಿಐ ಗೋನಾಳ ತಿಳಿಸಿದರು. ಆಯೋಗದ ಸದಸ್ಯ ರಾಘವೇಂದ್ರ, ಜಿಲ್ಲೆಯಲ್ಲಿ ಆರ್‌ಟಿಇನಡಿ ಹೆಣ್ಣುಮಕ್ಕಳ ದಾಖಲಾತಿ ಕಡಿಮೆ ಇದೆ. ಇದಕ್ಕೆ ಲಿಂಗಾನುಪಾತವೇ ಕಡಿಮೆ ಇದೆಯೋ ಅಥವಾ ಹೆಣ್ಣು ಮಕ್ಕಳೇ ದಾಖಲಾಗುತ್ತಿಲ್ಲವೋ ಎಂಬ ಬಗ್ಗೆ ವರದಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಅಗತ್ಯ ಸೌಲಭ್ಯ ನೀಡುವಂತೆ ಸೂಚಿಸಿದರು. ಅಪರ ಜಿಲ್ಲಾ ಧಿಕಾರಿ ದುರಗೇಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.