Advertisement

ಪತ್ರಕರ್ತರ ಕಲಾ ಸೇವೆಗೆ ಶ್ಲಾಘನೆ

04:30 PM Dec 02, 2019 | Naveen |

ರಾಯಚೂರು: ಈಗ ಸುದ್ದಿ ಭರಾಟೆ ಹೆಚ್ಚಾಗಿದೆ. ಸದಾ ಒತ್ತಡದಲ್ಲಿರುವ ಪತ್ರಕರ್ತರಿಗೆ ಬಿಡುವು ಮಾಡಿಕೊಂಡು ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಸಮಯ ನೀಡುತ್ತಿರುವುದು ಶ್ಲಾಘನೀಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಾಯಚೂರು ರಿಪೋರ್ಟರ್ ಗಿಲ್ಡ್‌ ಸಹಯೋಗದಲ್ಲಿ ರಾಜ್ಯೋತ್ಸವ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಅಣ್ಣ ತಂಗಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪತ್ರಕರ್ತರ ಸಂಘಗಳು ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದು ಸಹಜ. ಆದರೆ, ಇಂಥ ಸಾಮಾಜಿಕ ನಾಟಕ ಮಾಡಿರುವುದು ವಿಶೇಷ. ಇದು ತುಂಬಾ ಶ್ರಮದಾಯಕ ಕೆಲಸ. ಅದರಲ್ಲೂ ಸದಾ ಸುದ್ದಿ ಗದ್ದಲ್ಲದಲ್ಲಿರುವ ಪತ್ರಕರ್ತರನ್ನು ಒಂದೆಡೆ ಸೇರಿಸುವುದೇ ದೊಡ್ಡ ಸವಾಲು. ಸುದ್ದಿಯ ಧಾವಂತದಲ್ಲಿ ಸದಾ ಓಡುತ್ತಿರುತ್ತಾರೆ. ಕ್ಷಣ ಕ್ಷಣಕ್ಕೂ ಸುದ್ದಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಪತ್ರಕರ್ತರ ಮೇಲೆ ಒತ್ತಡ ಹೆಚ್ಚಾಗಿದೆ ಎಂದರು.

ಪತ್ರಕರ್ತರಿಗೆ ವಿಶ್ರಾಂತಿ ಸಿಗುವುದೇ ವಿರಳ. ಹಿಂದೆ ಇಂದಿನ ಸುದ್ದಿ ನಾಳೆಗೆ ರದ್ದಿ ಎನ್ನುತ್ತಿದ್ದರು. ಆದರೆ, ಈಗ ಹಾಗಲ್ಲ. ಈಗಿನ ಸುದ್ದಿ ಕೆಲ ಕ್ಷಣಗಳಲ್ಲೇ ರದ್ದಿ ಎನ್ನುವಂತಾಗಿದೆ. ಹೀಗಾಗಿ ಪತ್ರಕರ್ತರು ಕ್ಷಣ ಕ್ಷಣದ ಮಾಹಿತಿಗಾಗಿ ಹುಡುಕಾಡುತ್ತಿರುತ್ತಾರೆ. ಅಂಥ ಪತ್ರಕರ್ತರು ಸಾಕಷ್ಟು ಸಮಯ ಬಿಡುವು ಮಾಡಿಕೊಂಡು ಇಂಥದ್ದೊಂದು ನಾಟಕ ಪ್ರದರ್ಶನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾವಿದ ಕೆ.ಕರಿಯಪ್ಪ ಮಾಸ್ತರ್‌ ಮಾತನಾಡಿ, ಈಗ ರಂಗಾಸಕ್ತಿ ಕುಗ್ಗಿದೆ. ಇಂಥ ಸಾಮಾಜಿಕ ನಾಟಕಗಳ ಪ್ರದರ್ಶನ ಮಾಡುವುದೇ ವಿರಳವಾಗುತ್ತಿದೆ. ಆದರೆ, ಪತ್ರಕರ್ತರು ಅಭಿನಯಿಸುತ್ತಿರುವ ನಾಟಕಕ್ಕೆ ಈ ಮಟ್ಟದ ಜನ ಸೇರಿದ್ದನ್ನು ಕಂಡರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ನಾಟಕಕ್ಕೆ ಆಯ್ಕೆ ಮಾಡಿದ ಕತೆ ಸೂಕ್ತವಾಗಿದ್ದು, ಎಂದೆಂದಿಗೂ ಪ್ರಸ್ತುತವಾಗಿದೆ ಎಂದರು.

Advertisement

ಈ ನಿಮಿತ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ದುರುಗಮ್ಮ ಕರಡಿಗುಡ್ಡ ಅವರನ್ನು ಸನ್ಮಾನಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್‌, ರಂಗಕರ್ಮಿ ವಿ.ಎನ್‌.ಅಕ್ಕಿ, ರಂಗನಿರ್ದೇಶಕ ರಾಜಗೋಪಾಲ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ಕಾರ್ಯದರ್ಶಿ ಆರ್‌.ಗುರುನಾಥ, ರಾಜ್ಯ ಸಮಿತಿ ಸದಸ್ಯ ಸಿದ್ದು ಬಿರಾದಾರ, ರಿಪೋರ್ಟರ್ ಗಿಲ್ಡ್‌ ಪ್ರಧಾನ ಕಾರ್ಯದರ್ಶಿ ಚನ್ನಬಸವಣ್ಣ ಪಾಲ್ಗೊಂಡಿದ್ದರು. ಈರಣ್ಣ ಕರ್ಲಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next