ರಾಯಚೂರು: ಕೊರೊನಾ ಕಾಯಿಲೆ ಹರಡದಂತೆ ಆರೋಗ್ಯ ಇಲಾಖೆ ಕೆಲ ಸೂಚನೆಗಳನ್ನು ನೀಡಿದ್ದು, ಮುಖಗವಚ (ಮಾಸ್ಕ್) ಹಾಕಿಕೊಳ್ಳಲು ಸೂಚಿಸಿದೆ. ಆದರೆ, ಈಗ ಅದೇ ದೊಡ್ಡ ದಂಧೆಯಂತಾಗಿ ಮಾರ್ಪಟ್ಟಿದ್ದು, ಶಾಲಾ ಮಕ್ಕಳಿಗೂ ಅದರ ಬಿಸಿ ತಟ್ಟಿದೆ.
ಹೈದರಾಬಾದ್‌ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಕಾರಣ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಅಲ್ಲದೇ, ಜಿಲ್ಲೆಗೂ ಕೊರೊನಾ ಭೀತಿ ಇದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಔಷಧ ವರ್ತಕರು ಕಡಿಮೆ ದರದ ಮಾಸ್ಕ್ ಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಮತ್ತೊಂದೆಡೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೂ ಕಡ್ಡಾಯವಾಗಿ ಮಾಸ್ಕ್ಹಾ ಕಿಕೊಂಡೇ ಬರಬೇಕು ಎಂಬ ಮಕ್ಕಳಿಗೆ ಕಟ್ಟಪ್ಪಣೆ ಹೊರಡಿಸಿವೆ. ಅಲ್ಲದೇ, ಎನ್-90 ಮಾಸ್ಕನ್ನೇ ಹಾಕಿಕೊಳ್ಳಬೇಕು ಎಂಬ ಸೂಚನೆ ನೀಡಿವೆ. ಆದರೆ, ಈ ಮಾಸ್ಕ್ ದರ ಮಾರುಕಟ್ಟೆಯಲ್ಲಿ 300 ರೂ. ಇದ್ದು, ಪಾಲಕರಿಗೆ ಅನಗತ್ಯ ಹೊರೆಯಾಗುತ್ತಿದೆ. ಇನ್ನು ಬಹುತೇಕ ಜನ ಮನೆಯಿಂದ ಹೊರ ಬರುತ್ತಿದ್ದಂತೆ ಮುಖಗವಚ ಹಾಕಿಕೊಂಡೇ ಓಡಾಡುತ್ತಿದ್ದಾರೆ. ಜನನಿಬಿಡ ಸ್ಥಳಗಳಲ್ಲಿ ಮುಖಗವಚ ಹಾಕಿಕೊಂಡಯ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ.
ಜೋರು ದಂಧೆ: ಕೊರೊನಾ ವೈರಸ್ ಜಿಲ್ಲೆಗೆ ಕಾಲಿಡಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಮೆಡಿಕಲ್ ವ್ಯಾಪಾರಿಗಳು ಕಡಿಮೆ ಗುಣಮಟ್ಟದ ಮಾಸ್ಕ್ಗಳಿಗೂ ದುಬಾರಿ ಹಣ ಪಡೆಯುತ್ತಿದ್ದಾರೆ. 5 ರೂ. ಮಾಸ್ಕ್ ಗಳಿಗೂ 20 ರೂ. ಪಡೆಯುತ್ತಿದ್ದಾರೆ. ಇನ್ನು ಕೆಲವೆಡೆ ನೋ ಸ್ಟಾಕ್ ಎನ್ನುತ್ತಿದ್ದರೆ, ದುಬಾರಿ ಬೆಲೆಯದ್ದು ಇದೆ ಬೇಕಾ ಎಂದು ಕೇಳುತ್ತಿದ್ದಾರೆ. ಇನ್ನು ಖಾಸಗಿ ಶಾಲೆಗಳು ಕೂಡ ಮಾಸ್ಕ್ ಕಡ್ಡಾಯವಾಗಿ ಖರೀದಿಸಬೇಕು ಎನ್ನುತ್ತಿರುವುದರಿಂದ ಮೆಡಿಕಲ್‌ಗಳ ವರ್ತಕರಿಗೆ ಜೋರು ವ್ಯಾಪಾರಾವಾಗುತ್ತಿರುವುದಂತೂ ಸತ್ಯ.
ಮುಂದುವರಿದ ತಪಾಸಣೆ: ಇನ್ನು ಜಿಲ್ಲೆಯಲ್ಲಿ ಐದು ಕಡೆ ಚೆಕ್‌ಪೋಸ್ಟ್ ಸ್ಥಾಪಿಸಿ ತಪಾಸಣೆ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯ ಸಾವಿರಾರು ಜನರ ತಪಾಸಣೆ ನಡೆಸಿದ್ದಾರೆ. ಶುಕ್ರವಾರ ಗಡಿಭಾಗದ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸಿದ 250 ವಾಹನಗಳನ್ನೂ ತಪಾಸಣೆ ಮಾಡಿದ್ದು, 3 ಸಾವಿರಕ್ಕೂ ಅಧಿಕ ಜನರ ಆರೋಗ್ಯ ಪರೀಕ್ಷಿಸಲಾಗಿದೆ. ಆದರೆ, ಈವರೆಗೂ ಒಂದೇ ಒಂದು ಪ್ರಕರಣ ಕಂಡು ಬಂದಿಲ್ಲ. ಹೀಗಾಗಿ ರಿಮ್ಸ್‌ನಲ್ಲಿ ಪ್ರತ್ಯೇಕ ವಾರ್ಡ್ ಆರಂಭಿಸಿದರೂ ಒಬ್ಬ ರೋಗಿ ಕೂಡ ಬಂದಿಲ್ಲ.
ಕಾಲರ್ ಟ್ಯೂನ್ ಸಂದೇಶ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲು ಈಗಾಗಲೇ ಪ್ರಕಟಣೆ ನೀಡಿರುವ ಸರ್ಕಾರ ಕಾಲರ್ ಟ್ಯೂನ್ ಮೂಲಕವೂ ಜಾಗೃತಿ ಮೂಡಿಸುತ್ತಿದೆ. ಯಾರಿಗೆ ಕರೆ ಮಾಡಿದರೂ ಕೊರೊನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಲಾಗುತ್ತಿದೆ. ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು, ಕೆಮ್ಮುವವರು, ಸೀನುವವರಿಂದ ದೂರವಿರುವುದು, ಮೊಟ್ಟೆ, ಮಾಂಸ ಸೇವೆಗೂ ಮುನ್ನ ಎಚ್ಚರಿಕೆ ವಹಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಕೊರೊನಾ ವೈರಸ್ ವಿಚಾರದಲ್ಲಿ ಜನ ಆತಂಕಪಡುವ ಅಗತ್ಯವಿಲ್ಲ. ದುಬಾರಿ ಹಣ ನೀಡಿ ಮಾಸ್ಕ್ಗಳನ್ನು ಖರೀದಿಸುವ ಅಗತ್ಯವಿಲ್ಲ. ಕಾಯಿಲೆ ಸೋಂಕಿತರ ತಪಾಸಣೆ ಮಾಡುವಾಗ ಆರೋಗ್ಯ ಸಿಬ್ಬಂದಿ ಎನ್-90 ಮಾಸ್ಕ್ಗಳನ್ನು ಬಳಸುತ್ತಾರೆ. ಅದು ಎಲ್ಲ ಕಡೆ ಬಳಸಬೇಕೆಂದಿಲ್ಲ. ಅಕ್ಕಪಕ್ಕದಲ್ಲಿ ಯಾರಾದರೂ ಕೆಮ್ಮುತ್ತಿದ್ದರೆ, ಜಾಸ್ತಿ ಸೀನುತ್ತಿದ್ದರೆ ಮಾಸ್ಕ್ ಬಳಸಬಹುದು. ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ದೃಢಪಟ್ಟಿಲ್ಲ.
ರಾಮಕೃಷ್ಣ,
ಜಿಲ್ಲಾ ಆರೋಗ್ಯಾಧಿಕಾರಿ, ರಾಯಚೂರು