ಬೆಂಗಳೂರು: ರಾಯಚೂರಿನಲ್ಲಿ ಮೂರು ಜನ ಕಲುಷಿತ ನೀರು ಕುಡಿದು ತೀರಿ ಹೋಗಿದ್ದಾರೆ. ಮೃತರಾದವರಿಗೆ ಸಿಎಂ ಫಂಡ್ ನಿಂದ ತಲಾ ಐದು ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಕೆಡಬ್ಲ್ಯೂಎಸ್ ಎಸ್ ಬಿ ತನಿಖೆ ನಡೆಸಲು ಸೂಚಿಸಿದ್ದೇನೆ. ಟೆಕ್ನಿಕಲ್ ರಿಪೋರ್ಟ್ ಕೊಡಲು ಸೂಚಿಸಿದ್ದೇನೆ. ನೀರಿನ ಪರೀಕ್ಷೆಗೆ ರಾಯಚೂರಿನ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಅಧಿಕಾರಿಗಳ ಲೋಪದೋಷವಿದೆಯೇ ಎನ್ನುವುದರ ಬಗ್ಗೆ ಡಿವೈಎಸ್ ಪಿ ನೇತೃತ್ವದಲ್ಲಿ ಪೊಲೀಸ್ ತನಿಖೆ ಮಾಡಲಾಗುತ್ತಿದೆ ಎಂದರು.
ಎರಡನೇ ಅಲೆಯ ಕೋವಿಡ್ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ಎರಡನೇ ಅಲೆಯಲ್ಲಿ ಕೋವಿಡ್ ನಿಂದ ಮೃತರಾದವರ ಕುಟುಂಬಗಳಿಗೆ ಪರಿಹಾರ ಕೊಡಲಾಗಿದೆ. ವಿಶೇಷ ಪ್ರಕರಣಗಳಲ್ಲಿ ಕೆಲವರಿಗೆ ಪರಿಹಾರ ಬಿಟ್ಟು ಹೋಗಿದ್ದರೆ ಅದನ್ನು ಕೊಡಲು ಕ್ರಮ ತೆಗೆದು ಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರ ರಾಜ್ಯದ ಬಾಗಿಲು ಸದಾ ತೆರೆದಿರುತ್ತದೆ: ಆದಿತ್ಯ ಠಾಕ್ರೆ
ಪಠ್ಯ ಪುಸ್ತಕವನ್ನು ವಾಪಸ್ ಪಡೆಯಿರಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯನವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಅವರ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿಲ್ಲವೇ? ಈಗಾಗಲೇ ಸಮಿತಿ ವಿಸರ್ಜನೆ ಮಾಡುತ್ತೇವೆ. ಪಠ್ಯದಲ್ಲಿ ಸಮಸ್ಯೆಗಳಿದ್ದರೆ ಪರಿಷ್ಕರಣೆ ಮಾಡಿ ಮುದ್ರಣ ಮಾಡುತ್ತೇವೆ ಎಂದರು.