ರಾಯಚೂರು: ಪ್ರತಿ ವರ್ಷ ನವೆಂಬರ್ ಅಂತ್ಯಕ್ಕೆ ಕೊರೆವ ಚಳಿ ಮೈ ನಡುಗಿಸುತ್ತಿತ್ತು. ಆದರೆ, ಈ ಬಾರಿ ಮಾತ್ರ ಜನರಿಗೆ ಈವರೆಗೂ ಚಳಿಯ ಅನುಭವವೇ ಆಗುತ್ತಿಲ್ಲ. ಮಾನ್ಸೂನ್ ಹೆಚ್ಚಾದ ಕಾರಣ ಚಳಿಗಾಲವೂ ವಿಳಂಬವಾಗಿದೆ.
ಇತ್ತೀಚೆಗೆ ಎಂದೂ ಕಾಣದಂಥ ದಟ್ಟ ಮಂಜು ಆವರಿಸಿದ್ದನ್ನು ಕಂಡು ಬಿಸಿಲೂರು ಜನ ಅಚ್ಚರಿಗೆ ಒಳಗಾಗಿದ್ದರು. ಬೇಸಿಗೆಯಲ್ಲಿ ಮಿತಿ ಮೀರಿದ ಬಿಸಿಲು ಅನುಭವಿಸಿದ ಜನರಿಗೆ, ಈ ಬಾರಿ ಮಳೆಗಾಲದಲ್ಲಿ ದೀರ್ಘಾವಧಿ ಮಾನ್ಸೂನ್ ಕಂಡಿದ್ದಾರೆ. ಅದರ ಜತೆಗೆ ದಟ್ಟ ಮಂಜಿನ ಅನುಭವವೂ ಆಗಿದೆ. ಈಗ ಚಳಿಗಾಲವೂ 15 ದಿನ ತಡವಾಗುತ್ತಿದೆ. ವಾತಾವರಣದಲ್ಲಿ ಸಂಪೂರ್ಣ ಅಸಮತೋಲನ ಏರ್ಪಟ್ಟು ರೈತಾಪಿ ವರ್ಗವನ್ನು ಸಂಕಷ್ಟಕ್ಕೀಡು ಮಾಡಿದೆ. ಬೇಕಿದ್ದಾಗ ಮಳೆ ಬಾರದೆ, ಕೊನೆ ವೇಳೆ ಜೋರು ಮಳೆ ಸುರಿಯಿತು. ಇದರಿಂದ ಮುಂಗಾರು ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದರೆ, ಹಿಂಗಾರಿಗಾಗಿ ಕಾದು ಕುಳಿತ ರೈತರಿಗೆ ತುಸು ನೆಮ್ಮದಿ ಮೂಡಿಸಿತ್ತು.
ಆದರೆ, ಈಗ ಚಳಿಗಾಲವೂ ನಿಧಾನಗತಿಯಲ್ಲಿ ಪ್ರವೇಶಿಸುತ್ತಿದ್ದು, ಜೋಳದ ಇಳುವರಿಗೆ ಧಕ್ಕೆ ಎದುರಾಗುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಬಿಡುವ ಕೊರೆವ ಚಳಿಯಿಂದ ಜೋಳದ ಬೆಳೆ ಚನ್ನಾಗಿ ಬರುತ್ತದೆ. ನ.20ರ ಗಡಿ ತಲುಪಿದರೂ ಇನ್ನೂ ಜನತೆಗೆ ಮಾತ್ರ ಚಳಿಯ ಅನುಭವವೇ ಆಗುತ್ತಿಲ್ಲ. ಇದರಿಂದ ಜೋಳ ಬೆಳೆಗಾರರಿಗೆ ತುಸು ಆತಂಕವಿದೆ.
ಉಷ್ಣಾಂಶದಲ್ಲಿ ಸಾಮ್ಯತೆ: ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಉಷ್ಣಾಂಶದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ ವರ್ಷ ಈ ವೇಳೆಗೆ ಸರಾಸರಿ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಈಗಲೂ 19-20ರೊಳಗೆ ಉಷ್ಣಾಂಶ ದಾಖಲಾಗುತ್ತಿದೆ. ಆದರೆ, ಚಳಿಗೂ ಉಷ್ಣಾಂಶಕ್ಕೂ ನೇರ ಸಂಬಂಧವಿಲ್ಲ. ಸಾಮಾನ್ಯವಾಗಿ ಈ ವೇಳೆಗಾಗಲೇ ಚಳಿ ಜೋರಾಗಿತ್ತು ಎನ್ನುತ್ತಾರೆ ಹವಾಮಾನ ತಜ್ಞರು.
ಜೋಳಕ್ಕೆ ಸೈನಿಕ ರೋಗ: ಬೆಳೆದು ನಿಂತಿರುವ ಜೋಳದ ಬೆಳೆ ಸೈನಿಕ ಹುಳುಬಾಧೆಗೆ ತುತ್ತಾಗುತ್ತಿದೆ. ಆದರೆ, ಜೋಳದ ಬೆಳೆಗೆ ಹುಳುಬಾಧೆಯೇ ಇರಲಿಲ್ಲ. ಕಳೆದ ವರ್ಷದಿಂದ ಜೋಳಕ್ಕೂ ಔಷಧ ಸಿಂಪಡಿಸುವ ಸ್ಥಿತಿ ಬಂದೊದಗಿದೆ. ಇದಕ್ಕೆ ವಾತಾವರಣ ವೈಪರೀತ್ಯ ಕೂಡ ಕಾರಣ ಎನ್ನುತ್ತಾರೆ ತಜ್ಞರು. ಮಳೆಯಾಗಲಿ, ಬಿಸಿಲಾಗಲಿ, ಚಳಿಯಾಗಲಿ ಸಕಾಲಕ್ಕೆ ಆಗಬೇಕು. ಮಾನ್ಸೂನ್ ದೀರ್ಘ ಕಾಲದವರೆಗೂ ಸುರಿದ ಕಾರಣ ಅದರ ನೇರ ಪರಿಣಾಮ ಚಳಿಗಾಲದ ಮೇಲೆ ಆಗುತ್ತಿದೆ. ಈಗ ಜೋಳಕ್ಕೆ ಸೈನಿಕ ಹುಳು ಬಾಧೆ ಹೆಚ್ಚಾಗಿ ಪೀಡಿಸಲು ಇದೂ ಒಂದು ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಹವಾಮಾನ ವೈಪರೀತ್ಯ ಸಹಜ ಪ್ರಕ್ರಿಯೆ. ಆದರೆ, ಈ ಬಾರಿ ಮಾನ್ಸೂನ್ ಮಳೆ ತುಸು ದೀರ್ಘವಾಗಿದ್ದರಿಂದ ಚಳಿಯ ಅನುಭವ ಕೂಡ ತಡವಾಗುತ್ತಿದೆ. ಚಳಿಗಾಲ ಆವರಿಸಿಕೊಳ್ಳಲು ಹೆಚ್ಚೇನು ಅವ ಧಿ ಬೇಕಾಗುವುದಿಲ್ಲ. ಏಳೆಂಟು ದಿನಗಳಲ್ಲೇ ಕೊರೆಯುವ ಚಳಿ ಶುರುವಾಗುತ್ತದೆ. ಕಳೆದ ವರ್ಷ ಉಷ್ಣಾಂಶದಲ್ಲಿ ಹೆಚ್ಚು ಕಡಿಮೆ 20 ಡಿಗ್ರಿ ಸೆಲ್ಸಿಯಸ್ ಇದ್ದರೂ ಚಳಿಯ ಪ್ರಮಾಣ ಹೆಚ್ಚಾಗಿತ್ತು. ಡಿಸೆಂಬರ್ ಆರಂಭದ ವೇಳೆಗೆ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ.
ಡಾ| ಸತ್ಯನಾರಾಯಣ,
ಹವಾಮಾನ ತಜ್ಞರು, ಕೃಷಿ ವಿವಿ