ರಾಯಚೂರು: ಕೋವಿಡ್19 ಎಫೆಕ್ಟ್ ನಿಂದ ಒಂದು ವಾರಗಳ ಸ್ಥಗಿತಗೊಂಡಿದ್ದ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೋಮವಾರದಿಂದ ಕಾರ್ಯಾರಂಭಿಸಿದೆ. ಆದರೆ, ಮೊದಲ ದಿನ ಮಾಹಿತಿ ಕೊರತೆಯಿಂದ ಸಾಕಷ್ಟು ರೈತರು ಬಂದಿರಲಿಲ್ಲ.
ರಾಜ್ಯದಲ್ಲೇ ದೊಡ್ಡ ಮಾರುಕಟ್ಟೆ ಎನಿಸಿಕೊಂಡ ಈ ಎಪಿಎಂಸಿಯಲ್ಲಿ ನಿತ್ಯ ಏನಿಲ್ಲವೆಂದರೂ ಎರಡರಿಂದ ಎರಡೂವರೆ ಕೋಟಿ ವಹಿವಾಟು ನಡೆಯುತ್ತದೆ. ಅಲ್ಲದೇ, ಈಗ ಬೆಳೆ ಕಟಾವಾಗಿದ್ದು, ರೈತರು ಅದನ್ನು ಇಟ್ಟುಕೊಳ್ಳುವುದು ಕಷ್ಟವಾಗುತ್ತಿದೆ. ಮೆಣಸಿನಕಾಯಿ ಬೆಳೆದ ರೈತರಂತೂ ಕೋಲ್ಡ್ ಸ್ಟೋರೇಜ್‌ಗಳಲ್ಲಿ ತುಂಬಿಸಿದ್ದಾರೆ. ಕೋವಿಡ್19 ಭೀತಿ ಇನ್ನೂ ಹಾಗೆ ಇರುವ ಕಾರಣ ಜಿಲ್ಲಾ ಧಿಕಾರಿ ಸೂಕ್ತ ನಿರ್ದೇಶನ ನೀಡಿದ್ದು, ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ವರ್ತಕರು ಕೂಡ ತಮ್ಮ ಹಮಾಲಿಗಳಿಗೆ ಸೂಚನೆ ನೀಡಿದ್ದಾರೆ. ರೈತರು ಮಾರುಕಟ್ಟೆಗೆ ಬಂದ ಮೇಲೆ ವಾಸ್ತವ ಸ್ಥಿತಿ ಅರಿವಾಗಲಿದೆ. ಜಿಲ್ಲೆಗೆ ಈವರೆಗೆ 174 ಜನ ವಿದೇಶದಿಂದ ಹಿಂದಿರುಗಿದ್ದು, ಅವರು ಮತ್ತು ಅವರ ಕುಟುಂಬದ 719ರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಈವರೆಗೆ 9 ಮಾದರಿಗಳನ್ನು ಲ್ಯಾಬ್‌ಗ ಕಳುಹಿಸಿದ್ದು, ಅದರಲ್ಲಿ 5 ನೆಗೆಟಿವ್ ಬಂದರೆ, ಎರಡು ತಿರಸ್ಕೃತಗೊಂಡಿವೆ. ಇನ್ನೆರಡು ಬರಬೇಕಿದೆ. ಆರು ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇನ್ನೂ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಸರಕು ಸಾಗಣೆಗೆ ಅವಕಾಶ ನೀಡಿದ್ದು, ಪಾಸ್‌ಗಳನ್ನು ಪಡೆದು ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲೂ ಜನ ಸಂಚಾರ ತುಸು ಹೆಚ್ಚಾಗಿದ್ದು, ಎಲ್ಲರೂ ವ್ಯಾಪಾರ, ವಹಿವಾಟಿನ ಉದ್ದೇಶಕ್ಕೆ ಪಾಸ್ ಪಡೆದು ಸಂಚರಿಸುತ್ತಿದ್ದಾರೆ. ಅನಗತ್ಯವಾಗಿ ಜನ ಓಡಾಡುವುದಕ್ಕೆ ಅವಕಾಶ ನೀಡಿಲ್ಲ.
ಪೆಟ್ರೋಲ್ ಬಂಕ್‌ಗಳಲ್ಲಿ 200 ರೂ. ಗಿಂತ ಅಧಿಕ ಪೆಟ್ರೋಲ್, 500 ರೂ.ಗಿಂತ ಅಧಿಕ ಡೀಸೆಲ್ ಹಾಕಿಸಬೇಕು ಎಂದರೂ ಕೆಲವೆಡೆ ಬೇಕಾಬಿಟ್ಟಿ ಹಾಕಲಾಗುತ್ತಿತ್ತು. ಕ್ಯಾನ್ ಗಳಲ್ಲಿ ಹಾಕಬಾರದು ಎಂದರೂ ಆದೇಶ ಮೀರಲಾಯಿತು. ಪಾಸ್ ಇದ್ದವರಿಗೆ ಮಾತ್ರ ಪೆಟ್ರೋಲ್ ಹಾಕಲಾಯಿತು. ನಾನಾ ಕೆಲಸಗಳಿಗಾಗಿ ಜಿಲ್ಲಾಡಳಿತ ಕಚೇರಿಗೆ ಅಗಮಿಸಿದ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಪೊಲೀಸರು ಲಾಠಿ ಬೀಸಿ ಚದುರಿಸಿದ ಪ್ರಸಂಗ ನಡೆಯಿತು.
ಡ್ರೋಣ್ ಬಳಕೆ: ಮುಖ್ಯ ರಸ್ತೆಗಳು ಭಣಗುಡುತ್ತಿದ್ದರೂ ಬಡಾವಣೆಗಳಲ್ಲಿ ಜನ ರಾಜಾರೋಷವಾಗಿ ಗುಂಪಾಗಿ ಕೂಡುವುದು, ಓಡಾಡುವುದು ಮಾಡುತ್ತಿದ್ದಾರೆ. ಪೊಲೀಸರು ಪೆಟ್ರೋಲಿಂಗ್ ಮಾಡಿದಾಗ ಮಾತ್ರ ಚದುರುವುದು ಅವರು ಮುಂದೆ ಹೋಗುತ್ತಿದ್ದಂತೆ ಪುನಃ ಜಮಾಯಿಸುವುದನ್ನು ಗಮನಿಸಿದ ಪೊಲೀಸ್ ಇಲಾಖೆ ಡ್ರೋಣ್ ಮೂಲಕ ಜನರ ಚಲನ ವಲನ ಸೆರೆ ಹಿಡಿಯಲು ಮುಂದಾಗಿದೆ. ಸಿಯಾತಲಾಬ್‌ನಲ್ಲಿ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಡ್ರೋಣ್‌ಗೆ ಚಾಲನೆ ನೀಡಿದರು.