ರಾಯಚೂರು: ಕೋವಿಡ್ ನಿಯಮ ಗಾಳಿಗೆ ತೂರಿ ವ್ಯಾಪಾರ-ವಹಿವಾಟು ನಡೆಸಿದ 24 ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾದರೆ; ಮಂಗಳವಾರ ವಿವಿಧ ಅಂಗಡಿ-ಮುಂಗಟ್ಟುಗಳಿಗೆ ನುಗ್ಗಿದ ಪೊಲೀಸರು ಲಾಠಿ ರುಚಿ ತೋರಿಸುವ ಮೂಲಕ ವಹಿವಾಟಿಗೆ ಬ್ರೇಕ್ ಹಾಕಿದ ಪ್ರಸಂಗ ನಡೆಯಿತು. ಮಂಗಳವಾರ ರಾತ್ರಿಯಿಂದ ಜಾರಿಗೆ ಬರುವಂತೆ 14 ದಿನಗಳ ಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಹಗಲಲ್ಲಿ ವ್ಯಾಪಾರ-ವಹಿವಾಟಿಗೆ ವಿನಾಯಿತಿ ನೀಡಲಾಗಿತ್ತು. ಆದರೆ, ಅಗತ್ಯ ಕೆಲಸಗಳು ಮಾತ್ರವಲ್ಲದೇ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದರು.
ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸುವ ಮೂಲಕ ಬಾಗಿಲು ಹಾಕಿಸಿದರು. ಅಲ್ಲದೇ, ಸೋಮವಾರ ಕೂಡ ನಿಯಮ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸಿದ್ದಕ್ಕೆ ನಗರಸಭೆ ಪೌರಾಯುಕ್ತ ವೆಂಕಟೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದರ ಬಜಾರ್ ಠಾಣೆ ವ್ಯಾಪ್ತಿಯ ಭಂಗಿಕುಂಟಾ, ಬ್ರೇಸ್ತವಾರ ಪೇಟೆಯಲ್ಲೆಲ್ಲ ದಾಳಿ ನಡೆಸಿದ ಅ ಧಿಕಾರಿಗಳು 24 ಅಂಗಡಿಗಳ ಮುಂಗಟ್ಟು ಮುಚ್ಚಿಸಿದ್ದರು.
ಅಲ್ಲದೇ, ಈ ಕುರಿತು ಸದರ ಬಜಾರ್ ಠಾಣೆಗೆ ದೂರು ನೀಡಿದ್ದು, ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ 24 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊರೊನಾ ಕರ್ಫ್ಯೂ ಮಂಗಳವಾರ ರಾತ್ರಿಯಿಂದ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಜನಸಂದಣಿ ಜೋರಾಗಿತ್ತು. 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡುತ್ತಿರುವ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಸರ್ಕಾರಿ ಕಚೇರಿಗಳು, ದಿನಸಿ, ಖರೀದಿ ಸೇರಿದಂತೆ ವಿವಿಧೆಡೆ ಜನರ ಓಡಾಟ ಹೆಚ್ಚಾಗಿತ್ತು. ಜನ ರಾಜಾರೋಷವಾಗಿ ಓಡಾಡುತ್ತಿದ್ದರು. ಪೊಲೀಸರು ಸೂಚನೆ ನೀಡಿದರೂ ಜನ ಮಾತ್ರ ಕ್ಯಾರೆ ಎನ್ನದೆ ವ್ಯಾಪಾರದಲ್ಲಿ ತೊಡಗಿದ್ದರು.
ಇದರಿಂದ ಬೇಸತ್ತ ಪೊಲೀಸರು ಕೆಲವೆಡೆ ಲಾಠಿ ಬೀಸಿ ಜನರನ್ನು ಚದುರಿಸುವ ಕೆಲಸ ಮಾಡಬೇಕಾಯಿತು. ಅಗತ್ಯ ಸೇವೆ ಹೊರತಾಗಿಸಿ ಉಳಿದ ಸೇವೆ ಬಂದ್ ಮಾಡಿಸಲಾಯಿತು. ಹೋಟೆಲ್‌ಗಳಲ್ಲಿ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದರೆ, ಬೀದಿ ಬದಿ ಬಂಡಿಗಳಲ್ಲಿ ಜನ ಉಪಹಾರ, ಊಟ ಮಾಡುತ್ತಿದ್ದರು.
ಮಧ್ಯಾಹ್ನವಾಗುತ್ತಿದ್ದಂತೆ ಪೊಲೀಸರು ಬರುತ್ತಾರೆಂಬ ಭಯದಲ್ಲೇ ಅನೇಕ ವ್ಯಾಪಾರಿಗಳು ಅಂಗಡಿಗಳ ಮುಂಗಟ್ಟು ಮುಚ್ಚಿದರೆ ಕೆಲವೆಡೆ ಪೊಲೀಸರೇ ಬಲವಂತದಿಂದ ತೆರಳಿ ಮುಚ್ಚಿಸಿದರು. 14 ದಿನದ ಕೊರೊನಾ ಕರ್ಫ್ಯೂ ಕಾರಣಕ್ಕೆ ಎಲ್ಲೆಡೆ ಬ್ಯಾರಿಕೇಡ್ ಅಡ್ಡಗಟ್ಟಿ ಸಂಚಾರ ನಿಷೇ ಧಿಸುವ ಜತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.