ಚಿಕ್ಕೋಡಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ ಟಿಕೆಟ್ ಕೈ ತಪ್ಪಿದ್ದರಿಂದ ರಾಯಬಾಗ ಪಟ್ಟಣದಲ್ಲಿ ,ಸುಮಾರು 25 ಸಾವಿರ ಬೆಂಬಲಿಗರೊಂದಿಗೆ ಸ್ವಾಬಿಮಾನಿ ಸಭೆ ನಡೆಸಿ ರಾಯಬಾಗ ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧಾರ ಮಾಡಿದರು.
ಅಭ್ಯರ್ಥಿ ಶಂಭು ಕಲ್ಲೋಳಕರ ಮಾತನಾಡಿ ಹಣಬಲ.ಜನ ಬಲ ಮತ್ತು ದಬ್ಬಾಳಿಕೆ ಮಾಡುವವರು ಶಾಸಕರಾಗುತ್ತಾರೆ. ಆದರೆ ಸ್ವಾಭಿಮಾನಿ ಜನರು ಇದಕ್ಕೆ ಜಗ್ಗದೆ ಪ್ರಜಾಪ್ರಭುತ್ವ ಉಳಿವಿಗಾಗಿ ಸಾಮಾನ್ಯ ವ್ಯಕ್ತಿಗೆ ಬೆಂಬಲ ನೀಡಬೇಕು ಎಂದರು.
ಕೆಲವರು ನನಗೆ ಟಿಕೆಟ್ ಮಾತ್ರ ತಪ್ಪಿಸಿದ್ದಾರೆ.ಆದರೆ ಮತದಾನ ಮಾಡುವ ಜನರ ಪ್ರೀತಿ ವಾತ್ಸಲ್ಯ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಯಬಾಗ ಕ್ಷೇತ್ರದ ಜನ ಅಭಿವೃದ್ಧಿ ಹೊಂದಬಾರದೆಂದು ಕೆಲವರ ಕುತಂತ್ರ ನಡೆದಿದೆ. ಕೈಗಾರಿಕೆ. ಶಿಕ್ಷಣ ಸಂಸ್ಥೆ ತೆಗೆದು ರಾಯಬಾಗ ಸಾಕಷ್ಟು ಅಭಿವೃದ್ಧಿ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ದುಳಗೌಡ ಪಾಟೀಲ ಮಾತನಾಡಿ. ಜನ ಸೇವೆ ಮಾಡಲು ಐಎಎಸ್ ಹುದ್ದೆ ತ್ಯಾಗ ಮಾಡಿ ಬಂದಿರುವ ಶಂಭು ಕಲ್ಲೋಳಕರ ಅವರು ಕಳೆದ ಒಂದು ವರ್ಷದಿಂದ ಜನರ ಜೊತೆ ಸಂಪರ್ಕ ಇಟ್ಟುಕೊಂಡು ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದರೆ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಸ್ವಾಭಿಮಾನ ಜನರು ಕಲ್ಲೋಳಕರ ಅವರಿಗೆ ಬೆಂಬಲ ಕೊಟ್ಟು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕು ಎಂದರು.
ಕಾಡಾ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ ಮಾತನಾಡಿ ಕಳೆದ 35 ವರ್ಷದಿಂದ ರಾಯಬಾಗದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯ ಮಾಡಲಾಗಿತ್ತು. ಆದರೆ ನಮಗೆ ಟಿಕೆಟ್ ಮಿಸ್ ಆಗಿದ್ದು ಬೇಸರ ತರಿಸಿದೆ ಎಂದರು.
ನಾನಾಗೌಡ ಪಾಟೀಲ. ಶಿವಾನಂದ ಮರ್ಯಾಯಿ. ಲಕ್ಷ್ಮಣ ಮಂಗಿ. ಎಂ.ಎಚ್.ಪಟೇಲ. ಎ.ಬಿ.ಸಾಹುಕಾರ ಮಾತನಾಡಿದರು. ಸ್ವಾಭಿಮಾನಿ ಸಭೆಯಲ್ಲಿ ಕ್ಷೇತ್ರದ ಸುಮಾರು 54 ಹಳ್ಳಿಯ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.