Advertisement
ರಾಯಿ ಗ್ರಾ.ಪಂ. ಕಚೇರಿ ಎದುರಿನ 1 ಎಕ್ರೆ ಜಾಗದಲ್ಲಿ ಸ್ಥಳೀಯ ದೈವಸ್ಥಾನಕ್ಕೆ ಸಂಬಂಧಿಸಿ ಕಳೆದ ಎ. 24ರಂದು ಆವರಣ ಗೋಡೆ ನಿರ್ಮಿಸುತ್ತಿರುವಾಗ ಸ್ಥಳೀಯ ಗ್ರಾ.ಪಂ. ಆಕ್ಷೇಪ ವ್ಯಕ್ತಪಡಿಸಿತ್ತು. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ ಎಂ. ಸೂಚನೆ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ತಹಶೀಲ್ದಾರರ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿನ ಮೀಸಲಿಟ್ಟ ಜಮೀನು ಸರ್ವೇ ನಡೆಸಿದ ಬಳಿಕವೇ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು. ಇದೀಗ ಮತ್ತೆ ಆರಂಭಿಸಿದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.
ಈ ಜಾಗ ಮೈಸಂದಾಯ ಕೊಡಮಣಿತ್ತಾಯಿ, ಧೂಮಾವತಿ ದೈವಸ್ಥಾನ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಸಹಾಯಕ ಆಯುಕ್ತರು ಈಗಾಗಲೇ ಮೀಸಲಿಟ್ಟಿದ್ದಾರೆ ಎಂದು ದೈವಸ್ಥಾನದ ವ್ಯವಸ್ಥಾಪನ ಸಮಿತಿ ತಿಳಿಸಿದೆ. ಗ್ರಾ.ಪಂ. ಸಾರ್ವಜನಿಕ ಆಟದ ಮೈದಾನಕ್ಕೆ ಮೀಸಲಿಟ್ಟ 1 ಎಕ್ರೆ ಜಮೀನಿನಲ್ಲಿ ಮೈಸಂದಾಯ ಕೊಡಮಣಿತ್ತಾಯಿ, ಧೂಮಾವತಿ ದೈವದ ಹೆಸರಿನಲ್ಲಿ ಅತಿಕ್ರಮಣಗೊಳಿಸಿ ಆವರಣ ಗೋಡೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಈ ಒಂದು ಎಕ್ರೆ ಸರಕಾರಿ (ಪರಂಬೋಕು) ಜಮೀನು ಆಟದ ಮೈದಾನಕ್ಕಾಗಿ ಮೀಸಲಿಟ್ಟು, ಗ್ರಾ.ಪಂ. ಈಗಾಗಲೇ ನಿರ್ಣಯ ಕೈಗೊಂಡಿದೆ ಎಂದು ಗ್ರಾ.ಪಂ. ಅಧ್ಯಕ್ಷರು ಮತ್ತು ಪಿಡಿಒ ಹೆಸರಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
Related Articles
Advertisement