ಬಾಗಲಕೋಟೆ: ರಾಹುಲ್ ಗಾಂಧಿ ಅವರನ್ನು ತಮ್ಮ ತಮ್ಮ ಕ್ಷೇತ್ರಗಳಿಗೆ ಕರೆಸಲು ಜಿಲ್ಲೆಯ ಕಾಂಗ್ರೆಸ್ ಶಾಸಕರು ಒತ್ತಡ ಹಾಕುತ್ತಲೇ ಇದ್ದಾರೆ. ರವಿವಾರ ದವರೆಗೂ ಜಿಲ್ಲೆಯ 3 ಕ್ಷೇತ್ರಗಳಿಗೆ ಸೀಮಿತವಾಗಿದ್ದ ರಾಹುಲ್ ಕಾರ್ಯಕ್ರಮ ಸೋಮವಾರ ಜಮಖಂಡಿ ಕ್ಷೇತ್ರಕ್ಕೂ ವಿಸ್ತರಣೆಯಾಗಿದೆ.
ಫೆ.25ರಂದು ಮಧ್ಯಾಹ್ನ ಜಮಖಂಡಿಯ ಹಿರೇ ಪಡಸಲಗಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ರೈತರು ನಿರ್ಮಿಸಿದ ಬ್ಯಾರೇಜ್‌ಗೆ ರಾಹುಲ್ ಬಾಗಿನ ಅರ್ಪಿ ಸಲಿದ್ದಾರೆ. ಬಳಿಕ ಆಲೂರ ಪುನರ್ವಸತಿ ಕೇಂದ್ರದ ಬಳಿ ಇರುವ ವರ್ಧಮಾನ ನ್ಯಾಮಗೌಡ ಅವರ ಹೊಲದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ.
ಈ ಕಾರ್ಯಕ್ರಮ ಸೋಮವಾರ ಮಧ್ಯಾಹ್ನ ರಾಹುಲ್ ಕಾರ್ಯಕ್ರಮ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ ನೇತೃತ್ವದ ತಂಡ ಸ್ಥಳ ಪರಿಶೀಲನೆ ಕೂಡ ನಡೆಸಿದೆ. 4 ಕಡೆ ಸಮಾವೇಶ: ಫೆ.25ರಂದು ಜಿಲ್ಲೆಯ 4 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4 ಸಮಾವೇಶ ನಡೆಯಲಿವೆ.
ಮೊದಲು ವಿಜಯಪುರ ಜಿಲ್ಲೆಯಿಂದ ಬೀಳಗಿ ತಾಲೂಕು ಬಾಡಗಂಡಿಗೆ ಬರಲಿದ್ದು, ಬಾಡಗಂಡಿ ಬಾಪೂಜಿ ಅಂ.ರಾ. ವಸತಿ ಶಾಲೆಯ ಆವರಣದಲ್ಲಿ ಸಮಾವೇಶ ನಡೆಯಲಿದೆ. ವಿದ್ಯಾರ್ಥಿ ಕಾಂಗ್ರೆಸ್‌ನ ಪ್ರಮುಖರ ಜತೆ ಸಂವಾದ ನಡೆಸಲಿದ್ದಾರೆ. ಅಲ್ಲಿಂದ ಜಮಖಂಡಿ ತಾಲೂಕು ಆಲೂರ ಪುನರ್ವಸತಿ ಕೇಂದ್ರಕ್ಕೆ ತೆರಳಲಿದ್ದಾರೆ. ಇಲ್ಲಿಂದ ಹಿರೇಪಡಸಲಗಿ ಯ ಶ್ರಮಬಿಂದು ಸಾಗರಕ್ಕೆ ತೆರಳಿ, ಬಾಗಿನ ಅರ್ಪಿಸಲಿದ್ದಾರೆ.
ನಂತರ ಮುಧೋಳ ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಬಳಿಕ ಬಾಗಲಕೋಟೆ ನಗರದ ಸಕ್ರಿ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶ ನಡೆಸುವರು. ಬಳಿಕ ಹರಣಶಿಕಾರಿ ಕಾಲೋನಿಗೆ ಭೇಟಿ ನೀಡಿ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಬಳಿಕ ಹೊಸ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದು, ರಾತ್ರಿಯೇ ಜಿಲ್ಲೆಯ ಪ್ರಮುಖ ರೊಂದಿಗೆ ಮುಂದಿನ ವಿಧಾನಸಭೆ ಚುನಾವಣೆ ಕುರಿತು ಸಭೆ ನಡೆಸುವರು. ಫೆ.26ರಂದು ಬೆಳಗ್ಗೆ ನವನಗರದ ಕಲಾ ಭವನದಲ್ಲಿ ಮಾಜಿ ಸೈನಿಕರ ಜತೆ ಸಂವಾದ ನಡೆಸಿ, ರಾಮದುರ್ಗಕ್ಕೆ ತೆರಳಲಿದ್ದಾರೆ.