Advertisement

ರಾಹುಲ್‌ ಅವರದ್ದು ಹಿಟ್‌ ಆ್ಯಂಡ್‌ ರನ್‌ ಪಾಲಿಟಿಕ್ಸ್‌

08:57 AM Mar 24, 2017 | Team Udayavani |

ಹೊಸದಿಲ್ಲಿ: ಬಿಜೆಪಿ ಸೇರುವವರೆಗೂ ಮೌನವಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಇದೇ ಮೊದಲ ಬಾರಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ‘ರಾಹುಲ್‌ ಅವರಲ್ಲಿ ಬದ್ಧತೆಯನ್ನಾಗಲಿ, ಗಂಭೀರತೆಯನ್ನಾಗಲಿ ನಾನು ಹುಡುಕಿದರೂ ಕಾಣಲಿಲ್ಲ. ಅವರದ್ದೇನಿದ್ದರೂ ಹಿಟ್‌ ಆ್ಯಂಡ್‌ ರನ್‌ ಪಾಲಿಟಿಕ್ಸ್‌’ ಎಂದು ಕಿಡಿ ಕಾರಿದ್ದಾರೆ. ಬಿಜೆಪಿ ಸೇರಿದ ಮರುದಿನ ವಿವಿಧ ಸುದ್ದಿಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಹಿಂದುತ್ವ, ರಾಮಮಂದಿರ ಅಜೆಂಡಾವನ್ನು ಒಪ್ಪಿಕೊಂಡು, ಪ್ರಧಾನಿ ನರೇಂದ್ರ ಮೋದಿ  ಅವರ ಆಡಳಿತವನ್ನು ಮೆಚ್ಚಿ ಪಕ್ಷಕ್ಕೆ ಸೇರಿದ್ದೇನೆ’ ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಮುಖ್ಯ ಭೂಮಿಕೆಯಲ್ಲಿರುವವರೆಗೆ ತನಗೆ ಪಕ್ಷದಲ್ಲಿ ಆದ್ಯತೆ ಇತ್ತು. ಆದರೆ ಕಳೆದ ಮೂರು ವರ್ಷಗಳಿಂದ ತನ್ನ ಸಹಿತ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ರಾಹುಲ್‌ ಗಾಂಧಿಯವರ ನಾಯಕತ್ವ ಪ್ರಶ್ನಿಸಿದ್ದಾರೆ. ರಾಜಕೀಯದಲ್ಲಿ ಗಂಭೀರತೆ ಬೇಕು ಎಂದು ಹೇಳಿದ ಅವರು, ಸೋನಿಯಾ ಗಾಂಧಿ ಪುತ್ರನಲ್ಲಿ ಅದು ಅಲ್ಲ ಎಂದಿದ್ದಾರೆ. ಇಂದಿರಾ ಗಾಂಧಿ ಹತ್ಯೆಗೀಡಾದಾಗ ರಾಜೀವ್‌ ಗಾಂಧಿಯವರನ್ನು ತಾವು ಕಾಂಗ್ರೆಸ್‌ ನಾಯಕತ್ವ ವಹಿಸಬೇಕೆಂದು ಕೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ. ಅವರು ಸಮರ್ಥರೂ ಆಗಿದ್ದರು ಎಂದರು. ಕಾಂಗ್ರೆಸ್‌ನ ಹಾಲಿ ನಾಯಕತ್ವದ ಬಳಿ ಇಂಥ ವಿಚಾರಗಳನ್ನು ಪ್ರಸ್ತಾಪಿಸಲು ಅವಕಾಶ ಸಿಕ್ಕಿತ್ತಾ ಎಂಬ ಪ್ರಶ್ನೆಗೆ ಇಲ್ಲ ಎಂದು ಹೇಳಿದ ಅವರು, ಈ ಕಾರಣಕ್ಕಾಗಿಯೇ ಮೂರು ವರ್ಷಗಳಿಂದ ಸುಮ್ಮನೆ ಕುಳಿತಿದ್ದಾಗಿ ಹೇಳಿದರು.

ಎಲ್ಲ ಹುದ್ದೆ, ಘನತೆ, ಗೌರವಗಳನ್ನು ಅನುಭವಿಸಿದ ಬಳಿಕ ಕಾಂಗ್ರೆಸ್‌ ತ್ಯಜಿಸುತ್ತಿರುವುದಾಗಿ ಆ ಪಕ್ಷದ ನಾಯಕರು ಟೀಕಿಸುತ್ತಿರುವ ಬಗ್ಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್‌ ಬೆಳವಣಿಗೆಗೆ ತಮ್ಮ ಕೊಡುಗೆಯೂ ಇದೆ. 1999ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತವನ್ನೂ ನೀಡಿದ್ದಾಗಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಸೋನಿಯಾ ಬೆಸ್ಟ್‌: ಕಾಂಗ್ರೆಸ್‌ನಲ್ಲಿ ಸೋನಿಯಾ ಹೊರತುಪಡಿಸಿ ಉಳಿದವರೆಲ್ಲರಿಗೂ ಕಾಂಗ್ರೆಸ್‌ ಬಗ್ಗೆ ಆಸಕ್ತಿಯೇ ಇಲ್ಲ ಎಂದಿದ್ದಾರೆ ಕೃಷ್ಣ . ಕಾಂಗ್ರೆಸ್‌ ಅಧ್ಯಕ್ಷರು ಖುದ್ದಾಗಿ ಹಲವಾರು ಸಮಸ್ಯೆಗಳನ್ನು ಕ್ಲುಪ್ತವಾಗಿ ಬಗೆಹರಿಸುತ್ತಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರ ಹೆಸರನ್ನು ನೆನಪಿಸಿಕೊಂಡು ಮಾತನಾಡುತ್ತಾರೆ ಎಂದರು. ಆದರೆ ಈಗ ಅಂಥ ಪರಿಸ್ಥಿತಿಯೇ ಇಲ್ಲ ಎಂದು ಆಕ್ಷೇಪಿಸಿದರು. ಇತ್ತೀಚೆಗಷ್ಟೇ ಉತ್ತರ ಪ್ರದೇಶ ಮತ್ತು ಇತರ ನಾಲ್ಕು ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣಾ ಫ‌ಲಿತಾಂಶದ ಬಗ್ಗೆ ಮಾತನಾಡಿದ ಕೃಷ್ಣ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಡೆದ ಸ್ಥಾನಗಳನ್ನು ಗಮನಿಸಿದರೆ ‘ಕಾಂಗ್ರೆಸ್‌ ಮುಕ್ತ ಭಾರತ’ ಎನ್ನುವ ಅಂಶ ಶೀಘ್ರವೇ ಜಾರಿಯಾಗಲಿದೆ ಎಂದಿದ್ದಾರೆ. ‘ಆ ರಾಜ್ಯದಲ್ಲಿ ಸಣ್ಣ ಪಕ್ಷಗಳು 30 ಸ್ಥಾನಗಳಲ್ಲಿ ಸ್ಪರ್ಧಿಸಿ 9ರಲ್ಲಿ ಗೆದ್ದಿವೆ. ದೇಶವನ್ನು ಹಲವು ವರ್ಷಗಳ ಕಾಲ ಆಳ್ವಿಕೆ ಮಾಡಿ, ಇತರ ಪಕ್ಷದಿಂದ (ಸಮಾಜವಾದಿ ಪಕ್ಷ) 100 ಸ್ಥಾನಗಳನ್ನು ಪಡೆದುಕೊಂಡು ಆರು ಅಥವಾ ಏಳು ಸ್ಥಾನಗಳಲ್ಲಿ ಗೆದ್ದಿದೆ’ ಎಂದರು ಕೃಷ್ಣ. 

ಅಪಮೌಲ್ಯಕ್ಕೆ ಶ್ಲಾಘನೆ: ಕಾಂಗ್ರೆಸ್‌ನಿಂದ ಟೀಕೆಗೆ ಒಳಗಾಗಿರುವ ಕೇಂದ್ರ ಸರಕಾರ ಘೋಷಣೆ ಮಾಡಿರುವ ನೋಟುಗಳ ಅಪಮೌಲ್ಯವನ್ನು ಕೃಷ್ಣ ಶ್ಲಾಘಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮ ಶ್ಲಾಘನೀಯವಾದದ್ದು ಎಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಮೋದಿ ತಳೆದಿರುವ ನಿಲುವು ಸ್ತುತ್ಯರ್ಹವಾಗಿದೆ ಮತ್ತು ಭರವಸೆ ಮೂಡಿಸುವಂತಿದೆ ಎಂದಿದ್ದಾರೆ. ಕಳೆದ ವರ್ಷ ನ.8ರಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದ ಕ್ರಮವನ್ನು ತಾವೂ ಬೆಂಬಲಿಸಿದ್ದಾಗಿ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next