ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ; ಹೊಸದಾಗಿ ಸಾಮಾನ್ಯ ಪಾಸ್ಪೋರ್ಟ್ ಪಡೆಯಲು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಮೇ 26ಕ್ಕೆ ಮುಂದೂಡಿತು. ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ. ರಾಜತಾಂತ್ರಿಕ ಪ್ರಯಾಣಕ್ಕೆ ಸಂಬಂಧಿಸಿದ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಅವರು ಸಾಮಾನ್ಯ ಪಾಸ್ಪೋರ್ಟ್ ಪಡೆಯಲು ನಿರಾಕ್ಷೇಪಣ ಪತ್ರ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
“ಅರ್ಜಿದಾರರ ಸಂಸತ್ ಸದಸ್ಯತ್ವವು 2023ರ ಮಾರ್ಚ್ನಲ್ಲಿ ಅಂತ್ಯಗೊಂಡಿದೆ. ಹಾಗಾಗಿ ರಾಜತಾಂತ್ರಿಕ ಪ್ರಯಾಣಕ್ಕೆ ಸಂಬಂಧಿಸಿದ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಇದೀಗ ಹೊಸದಾಗಿ ಸಾಮಾನ್ಯ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯವು ಇದಕ್ಕಾಗಿ ಅನುಮತಿ ಹಾಗೂ ನಿರಾಕ್ಷೇಪಣ ಪತ್ರ ನೀಡಬೇಕು” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಅರ್ಜಿಯ ವಿಚಾರಣೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಶುಕ್ರವಾರಕ್ಕೆ ಮುಂದೂಡಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಹಾಗೂ ಇತರರಿಗೆ 2015ರ ಡಿ.19ರಂದು ನ್ಯಾಯಾಲಯ ಜಾಮೀನು ನೀಡಿತು.