ಹೊಸದಿಲ್ಲಿ: ಬ್ರಿಟನ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಎಬ್ಬಿಸಿರುವ ವಿವಾದದ ಬಿಸಿ ಮತ್ತಷ್ಟು ಏರಿದ್ದು, ಗುರುವಾರ ಕಾಂಗ್ರೆಸ್-ಬಿಜೆಪಿ ನಡುವೆ ಭಾರೀ ವಾಗ್ವಾದವೇ ನಡೆದಿದೆ.
ಒಂದು ಕಡೆ ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರೆ, ಮತ್ತೂಂದು ಕಡೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಶಿ, ಕಿರಣ್ ರಿಜಿಜು, ಮಾಜಿ ಸಚಿವ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿ ನಡೆಸಿ ರಾಹುಲ್ ವಿರುದ್ಧ ಹರಿಹಾಯ್ದಿದ್ದಾರೆ.
ಇದರ ನಡುವೆಯೇ, ಸಂಸತ್ನ ಉಭಯ ಸದನಗಳಲ್ಲಿ ಗುರುವಾರವೂ ಕೋಲಾಹಲ ಉಂಟಾದ ಕಾರಣ ದಿನದ ಮಟ್ಟಿಗೆ ಕಲಾಪಗಳನ್ನು ಮುಂದೂಡಲಾಗಿದೆ. ಸುದ್ದಿಗೋಷ್ಠಿ ನಡೆಸುವುದಕ್ಕೂ ಮುನ್ನ ರಾಹುಲ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸದನದಲ್ಲಿ ತಮಗೂ ಮಾತನಾಡಲು ಅವಕಾಶ ನೀಡುವಂತೆ ಕೋರಿದ್ದರು.
ಮಾನವ ಸರಪಳಿ: ಅದಾನಿ ಗ್ರೂಪ್ನ ಅವ್ಯವಹಾರಗಳ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸುವಂತೆ ಕೋರಿ ವಿಪಕ್ಷಗಳು ಹೋರಾಟ ಮುಂದುವರಿಸಿವೆ. ಗುರುವಾರ ಸಂಸತ್ ಭವನದ ಆವರಣದಲ್ಲಿ ವಿಪಕ್ಷಗಳ ನಾಯಕರು ಮಾನವ ಸರಪಳಿ ರಚಿಸಿ, ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಆತ್ಮೀಯ ಸ್ನೇಹಿತ ಅದಾನಿಯನ್ನು ರಕ್ಷಿಸಲು ಎಲ್ಲ ರೀತಿಯ “ದಾರಿತಪ್ಪಿಸುವ ತಂತ್ರ’ ಅನುಸರಿಸುತ್ತಿರುವುದು ದುರದೃಷ್ಟಕರ ಎಂದೂ ಹೇಳಿದ್ದಾರೆ. ಅದಾನಿ ವಿಚಾರ ಸಂಸತ್ನಲ್ಲಿ ಚರ್ಚೆ ಆಗಬಾರದು ಎಂಬ ಕಾರಣಕ್ಕೇ ಸರಕಾರವು ಕಲಾಪ ನಡೆಯದಂತೆ ನೋಡಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಆರೋಪಿಸಿದ್ದಾರೆ.