Advertisement

ರಾಹುಲ್‌  ಹಿಂದುತ್ವ ಉಡುಪಿ, ಶೃಂಗೇರಿ ಮಠಗಳಿಗೆ ಭೇಟಿ

06:00 AM Jan 20, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿಯೂ ಕಾಂಗ್ರೆಸ್‌ ಮೃದು ಹಿಂದುತ್ವ ಪ್ರಯೋಗಕ್ಕೆ ಮುಂದಾಗಿದೆ!

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಗುಜರಾತ್‌ನಲ್ಲಿ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ ಉದ್ದೇಶ ಯಶಸ್ವಿಯಾದ ಹಿನ್ನೆಲೆಯಲ್ಲಿ, ಮೃದು ಹಿಂದುತ್ವ ಧೋರಣೆಯನ್ನೇ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ಪ್ರಯೋಗಿಸಲು ನಿರ್ಧರಿಸಿದ್ದಾರೆ. ರಾಜ್ಯ ಪ್ರವಾಸದ ಸಂದರ್ಭದಲ್ಲಿ ಸುಪ್ರಸಿದ್ಧ ಶೃಂಗೇರಿ ಶಾರದಾ ಪೀಠ ಹಾಗೂ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಮೂಲಕ ಹಿಂದೂ ಮಠ ಹಾಗೂ ದೇವಸ್ಥಾನಗಳ ಯಾತ್ರೆ ಆರಂಭಿಸಲಿದ್ದಾರೆ.

ಫೆಬ್ರವರಿಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ರಾಹುಲ್‌, 20 ಅಥವಾ 21 ರಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆಂದು ತಿಳಿದುಬಂದಿದೆ. ಉಡುಪಿಗೆ ತೆರಳುವ ಮುನ್ನ ಶೃಂಗೇರಿ ಶಾರದಾ ಪೀಠಕ್ಕೂ ಭೇಟಿ ನೀಡಲಿದ್ದಾರೆ.

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಿಜೆಪಿ ಹಿಂದುತ್ವ ಮಂತ್ರ ಪಠಿಸುತ್ತಿರುವುದರಿಂದ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಸಾಕಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದು, ಆ ಭಾಗದಲ್ಲಿ ಗುಜರಾತ್‌ನಲ್ಲಿ ದೇವಸ್ಥಾನಗಳ ಭೇಟಿ ತಂತ್ರಗಾರಿಕೆ ಪ್ರಯೋಗಿಸಿದ ರೀತಿಯಲ್ಲೇ ಮೃದು ಹಿಂದುತ್ವ ಪ್ರಯೋಗ ಮಾಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ರಾಹುಲ್‌ ಗಾಂಧಿ ಹೊಂದಿದ್ದಾರೆ.

ಸಿದ್ದರಾಮಯ್ಯ ನಡೆ ಕುತೂಹಲ: ರಾಹುಲ್‌ ಗಾಂಧಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಈ ಹಿಂದೆ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳು ಕೃಷ್ಣ ಮಠಕ್ಕೆ ಭೇಟಿ ನೀಡಿದಾಗ ಮತ್ತು ಸ್ವತಃ ತಾವೇ ಉಡುಪಿಗೆ ಹೋಗಿದ್ದರೂ ಕೃಷ್ಣ ಮಠಕ್ಕೆ ಭೇಟಿ ನೀಡದೇ ಸಿಎಂ ವಾಪಸ್‌ ಬಂದಿದ್ದರು.

Advertisement

ಈಗ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿದ್ದು, ಆ ಸಂದರ್ಭದಲ್ಲಿ ಸಿಎಂ ಮಠಕ್ಕೆ ಭೇಟಿ ನೀಡದೇ ದೂರ ಉಳಿದರೆ, ಹಿಂದೂ ವಿರೋಧಿ ಎಂಬ ಆರೋಪ ಕೇಳಿ ಬರಲಿದೆ. ಅಲ್ಲದೇ ರಾಹುಲ್‌ ಗಾಂಧಿಯ ಮೃದು ಹಿಂದುತ್ವ ಪ್ರಯೋಗಕ್ಕೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ.

ಗುಜರಾತ್‌ ಚುನಾವಣೆಯಲ್ಲಿ ಯಶಸ್ವಿಯಾಗಿರುವ ಮೃದು ಹಿಂದುತ್ವ ಅಜೆಂಡಾವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ರಾಹುಲ್‌ ಗಾಂಧಿ, ಹಿಂದೂಗಳು ಹಾಗೂ ಹಿಂದುತ್ವದ ಬಗ್ಗೆ ಬಹಿರಂಗ ಆರೋಪ ಮಾಡದಂತೆ ಮುಖ್ಯಮಂತ್ರಿಗೆ ತಾಕೀತು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್‌ ಆದೇಶ ಪಾಲಿಸುತ್ತಾರಾ? ಅಥವಾ ತಮ್ಮ ಸಿದ್ಧಾಂತಕ್ಕೆ ಕಟಿ ಬದ್ದರಾಗಿರುತ್ತಾರಾ? ಎನ್ನುವುದು ಕುತೂಹಲ ಮೂಡಿಸಿದೆ.

ರಾಹುಲ್‌ ಪ್ರವಾಸದ ವೇಳಾ ಪಟ್ಟಿ: ರಾಹುಲ್‌ ಗಾಂಧಿ ಪ್ರವಾಸದ ಈಗಿರುವ  ವೇಳಾ ಪಟ್ಟಿ ಪ್ರಕಾರ ಫೆಬ್ರವರಿ 10 ರಿಂದ 12 ರ ವರೆಗೆ ಕಲಬುರ್ಗಿ ವಿಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ಬಳಿಕ ಬಳ್ಳಾರಿಯ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿಯಲ್ಲಿ ಬಸ್‌ ಮೂಲಕ ಪ್ರವಾಸ ಮಾಡಲಿದ್ದಾರೆ.

ಎರಡನೇ ಹಂತದಲ್ಲಿ ಮೈಸೂರು ವಿಭಾಗದಲ್ಲಿ ಮೂರು ದಿನ ಮತ್ತೂಂದು ಸುತ್ತಿನ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ರಾಹುಲ್‌ ಅವರು ಶೃಂಗೇರಿ ಹಾಗೂ ಉಡುಪಿ ಮಠಗಳಿಗೆ ಭೇಟಿ ನೀಡಲಿದ್ದಾರೆ. ಎರಡನೇ ಹಂತದ ಪ್ರವಾಸದ ಮೊದಲ ದಿನ ಶಿವಮೊಗ್ಗದಿಂದ ಚಿಕ್ಕಮಗಳೂರುವರೆಗೆ ಭದ್ರಾವತಿ, ತರೀಕೆರೆ, ಕಡೂರು, ಸಕ್ಕರಾಯಪಟ್ಟಣದ ಮೂಲಕ ಚಿಕ್ಕಮಗಳೂರಿಗೆ ಬಸ್‌ ಮೂಲಕ ಯಾತ್ರೆ ನಡೆಸಲಿದ್ದಾರೆ.

ಕಾಫಿ ಬೆಳೆಗಾರರ ಜತೆ ಮಾತುಕತೆ:
ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್‌, ಕಾಫಿ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರೊಂದಿಗೆ ಸಭೆ ನಡೆಸಲಿದ್ದಾರೆ.

ಅಂದು ಚಿಕ್ಕಮಗಳೂರಿನಲ್ಲಿಯೇ ವಾಸ್ತವ್ಯ ಹೂಡಿ, ಎರಡನೇ ದಿನ ಬೆಳಗ್ಗೆ ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮಂಗಳೂರಿನಿಂದ ಸುರತ್ಕಲ್‌, ಮುಲ್ಕಿ, ಕಾಪು, ಉಡುಪಿ, ಬ್ರಹ್ಮಾವರ, ಕೋಟಾ ಮೂಲಕ ಕುಂದಾಪುರದವರೆಗೂ ರೋಡ್‌ ಶೋ ನಡೆಸಿ, ನಂತರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

ಉಡುಪಿ ಕೃಷ್ಣ ಮಠದಲ್ಲಿ ಪೇಜಾವರ ಶ್ರೀ ಸೇರಿದಂತೆ ಅಷ್ಠ ಮಠಗಳ ಶ್ರೀಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ನಂತರ ಅರಸಿಕೆರೆ ಮೂಲಕ ತಿಪಟೂರು, ಕೆ.ಬಿ. ಕ್ರಾಸ್‌, ಗುಬ್ಬಿ ಮೂಲಕ ತುಮಕೂರುವರೆಗೂ ರೋಡ್‌ ಶೋ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರೈತರು, ಕಾರ್ಮಿಕರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next