Advertisement

ಗಾಂಧಿ ಬಂದಿದ್ದ ಬದನವಾಳುಗೆ ರಾಹುಲ್‌ ಭೇಟಿ

06:31 PM Sep 16, 2022 | Team Udayavani |

ನಂಜನಗೂಡು: ಕಳೆದ ಶತಮಾನದಲ್ಲಿ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದ ತಾಲೂಕಿನ ಬದನವಾಳಿಗೆ ಅ.2ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ನಂಜನಗೂಡಿಗೆ ಬುಧವಾರ ಆಗಮಿಸಿದ್ದ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಯವರ ಭಾರತ ಜೋಡೋ ಯಾತ್ರೆ ಕ್ರಮಿಸುವ ಕುರಿತು ಮಾಹಿತಿ ಪಡೆದು,
ಗುರುವಾರ ಮತ್ತೆ ನಂಜನಗೂಡಿಗೆ ಆಗಮಿಸಿ ಬದನವಾಳಿನ ಖಾದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುಂಡ್ಲುಪೇಟೆಯಿಂದ ಅ.1ರಂದು ಜೋಡೋ ಯಾತ್ರೆಯೊಂದಿಗೆ ಆಗಮಿಸುವ ರಾಹುಲ್‌ ಗಾಂಧಿ, ಅಂದು ರಾತ್ರಿಯನ್ನು ತಾಲೂಕಿನ ತಾಂಡವಪುರದ ಎಂಐಟಿ ಕಾಲೇಜಿನ ಆವರಣದ ಮೈದಾನದಲ್ಲಿ ಕಳೆದು, 2ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದ ಬದನವಾಳುವಿನ ಖಾದಿ ಕೇಂದ್ರಕ್ಕೆ ಭೇಟಿ ನೀಡಿ
ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ ಎಂದು ಹೇಳಿದರು.

ನಂತರ ಅವರು ಮತ್ತೆ ತಾಂಡವಪುರಕ್ಕೆ ಆಗಮಿಸಿ ಜೋಡೋ ಯಾತ್ರೆಯೊಂದಿಗೆ ಮೈಸೂರು ನಗರದತ್ತ ಪಾದಯಾತ್ರೆಯಲ್ಲಿ ಸಾಗುವರು ಎಂದು ಅವರು ನುಡಿದರು.

ಡಿಕೆಶಿಗೆ ಸ್ವಾಗತ: ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಮಾಜಿ ಸಂಸದ ಆರ್‌.ಧ್ರುವನಾರಾಯಣ, ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿಯವರೊಂದಿಗೆ ಆಗಮಿಸಿದ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪಕ್ಷದ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್‌, ತಾಲೂಕು ಅಧ್ಯಕ್ಷರಾದ ಕುರಹಟ್ಟಿ ಮಹೇಶ, ಶ್ರೀಕಂಠನಾಯಕ, ಸಿ. ಎಂ.ಶಂಕರ್‌, ಎಸ್‌.ಸಿ.ಬಸವರಾಜು ಮತ್ತಿತರರು ಸ್ವಾಗತಿಸಿದರು. ನಂತರ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಪಕ್ಷಾಧ್ಯಕ್ಷರಿಗೆ ತಾಲೂಕಿನ ಕೈ ಮುಖಂಡರಾದ ನಂದಕುಮಾರ್‌ ಹಡೆತಲೆ, ದೊರೆಸ್ವಾಮಿ ನಾಯಕ, ಶಿವಪ್ಪದೇವರು, ನಾಗೇಶರಾಜು, ಗಂಗಾಧರ್‌, ಖಾದರ್‌, ಅಕºರ್‌, ಶಿವಣ್ಣ ಮತ್ತಿತರರು ಹಾರ ಹಾಕಿ ಸ್ವಾಗತಿಸಿದರು.

ಬಿತ್ತನೆ ಮಾಡುವಾಗ ಬೀಜದ ಆಯ್ಕೆ
ನಂಜನಗೂಡು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌, ಕ್ಷೇತ್ರದಲ್ಲಿನ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಪೈಪೋಟಿ ನಡೆಯುತ್ತಿರುವ ಕುರಿತು ಸೂಕ್ತ ಉತ್ತರ ನೀಡದೆ ನುಣಿಚಿಕೊಂಡರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಆಗಿರುವ ಮಾಜಿ ಸಂಸದ ಆರ್‌.ಧ್ರುವನಾರಾಯಣ ಈಗಾಗಲೇ ಕ್ಷೇತ್ರದ ಪ್ರತಿ ಪಂಚಾಯ್ತಿಯನ್ನು ಭೇಟಿ ಮಾಡಿ ಸಂಘಟನೆಗೆ ಇಳಿದಿದ್ದಾರೆ. ಮಾಜಿ ಸಚಿವ ಡಾ.ಎಚ್‌
.ಸಿ.ಮಹದೇವಪ್ಪ ಜೋಡೋ ಯಾತ್ರೆ ನಂತರ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ಹಿರಿಯರ ಮಧ್ಯೆ ಕೇಶವಮೂರ್ತಿ ಇದ್ದಾರೆ. ಹೀಗಿರುವಾಗ ಪಕ್ಷದ ಪರಿಸ್ಥಿತಿ ಹೇಗೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ರಾಜ್ಯಾಧ್ಯಕ್ಷರು, ಭೂಮಿಯನ್ನು ಉತ್ತಿ ಹಸನು ಮಾಡಿದಷ್ಟು ಒಳ್ಳೆಯದು. ಎಲ್ಲರೂ ಉತ್ತಲಿ, ಬೀಜ ಬಿತ್ತುವಾಗ ನಾನು ಆಯ್ಕೆ ಮಾಡಿ ಘೋಷಿಸುತ್ತೇನೆ ಎನ್ನುವುದರ ಮೂಲಕ ಪಕ್ಷದ ಹುರಿಯಾಳುಗಳ ಹೆಸರನ್ನು ಗೌಪ್ಯವಾಗಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next