Advertisement

ರಸ್ತೆ ಬದಿಯ ಹೋಟೆಲ್‌ನಲ್ಲಿ ಟೀ ಕುಡಿದ ರಾಹುಲ್‌

03:03 PM Feb 25, 2018 | |

ವಿಜಯಪುರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿಜಯಪುರ ಜಿಲ್ಲೆಯ ಪ್ರವಾಸದ ವೇಳೆ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಲ್ಲದೇ, ರಸ್ತೆ ಬದಿ ಹೋಟೆಲ್‌ಗೆ ಅನಿರೀಕ್ಷಿತ ಪ್ರವೇಶಿಸಿ ಟೀ ಸವಿದು ಅಚ್ಚರಿ ಮೂಡಿಸಿದರು.

Advertisement

ತಿಕೋಟಾ ಕಾರ್ಯಕ್ರಮದ ಬಳಿಕ ವಿಜಯಪುರ ನಗರದಲ್ಲಿ ರೋಡ್‌ ಶೋ ಕಾರ್ಯಕ್ರಮ ಇತ್ತು. ಈ ವೇಳೆ ರಾಹುಲ್‌ ಅನಿರೀಕ್ಷಿತವಾಗಿ ಪ್ರವಾಸಿ ಮಂದಿರದ ಎದುರಿಗೆ ಇರುವ ಸಲೀಂ ಎಂಬುವರ ರಸ್ತೆ ಬದಿ ತಟ್ಟಿ ಹೋಟೆಲ್‌ಗೆ ಪ್ರವೇಶಿಸಿ ಟೀ ರುಚಿ ನೋಡಿ, ಬಿಸ್ಕತ್‌ ಸ್ವಾದ ನೋಡಿದರು.

ಟೀ ಸೇವನೆ ಬಳಿಕ ಎರಡು ಸಾವಿರ ರೂ. ನೀಡಲು ರಾಹುಲ್‌ ಮುಂದಾದರೂ “ನಿಮ್ಮಂಥ ನಾಯಕ ನನ್ನ ಹೋಟೆಲ್‌ ಪ್ರವೇಶಿಸಿ ಟೀ ಸೇವನೆ ಮಾಡಿದ್ದೇ ನನ್ನ ಅದೃಷ್ಟ ‘ ಎಂದ ಹೋಟೆಲ್‌ ಮಾಲೀಕ ಸಲೀಂ ಹಣ ಪಡೆಯಲು ನಿರಾಕರಿಸಿದರು. ಈ ಹಂತದಲ್ಲಿ ಜತೆಗಿದ್ದ ಜಲಸಂಪನ್ಮೂಲ ಸಚಿವ ಡಾ|ಎಂ.ಬಿ.ಪಾಟೀಲ ಅವರು ಸರ್‌ ನೀವು ಹಣ ಕೊಡುವುದು ಬೇಡ ನಾನು ಕೊಡುತ್ತೇನೆ ಎಂದು ಅವರು ಕೂಡ ಎರಡು ಸಾವಿರ ರೂ. ನೋಟು ನೀಡಿದರು. ರಾಹುಲ್‌ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ|
ಜಿ.ಪರಮೇಶ್ವರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಇತರರು ಸಾಥ್‌ ನೀಡಿದರು.

ಮತ್ತೂಂದೆಡೆ ರಾಹುಲ್‌ ಗಾಂಧಿ ಅವರು ವಿಜಯಪುರ ರೋಡ್‌ ಶೋ ಬಳಿಕ ನಗರದ ಗಾಂಧೀಜಿ ವೃತ್ತದಲ್ಲಿ ಸಣ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇದಿಕೆ ಏರುವ ಮುನ್ನ ರಾಹುಲ್‌ ಅವರು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹೂಮಾಲೆ ಹಾಕಿ ನಮನ ಸಲ್ಲಿಸಿದರು.

ತಿಕೋಟಾ ಸಮಾವೇಶದ ಬಳಿಕ ತೊರವಿ ಗ್ರಾಮಕ್ಕೆ ಆಗಮಿಸುತ್ತಲೇ ರಸ್ತೆಯ ಇಕ್ಕೆಲದಲ್ಲಿ ನಿಂತಿದ್ದ ಜನರು ರಾಹುಲ್‌ ಅವರನ್ನು ಸ್ವಾಗತಿಸಿದರು. ಬಳಿಕ ಅಲ್‌ ಅಮೀನ್‌ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆಗಳಲ್ಲಿ ನಿಂತು ರಾಹುಲ್‌ ಅವರತ್ತ ಕೈ ಬೀಸಿದಾಗ, ಕೆಲವು ವಿದ್ಯಾರ್ಥಿಗಳು ರಾಹುಲ್‌ ಅವರ ಕೈ ಕುಲುಕಿ ಪುಳಕಗೊಂಡರು. ಪಕ್ಕದಲ್ಲೇ ಹಮ್ಮಿಕೊಂಡಿದ್ದ ಸಣ್ಣ ಕಾರ್ಯಕ್ರಮದಲ್ಲಿ ಸೇರಿದ್ದ ಬಂಜಾರಾ ಸಮುದಾಯದ ಜನರು ಹೂಗುಚ್ಚ ನೀಡಿ ಸಂಭ್ರಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next