ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ.10ರಿಂದ 13ರವರೆಗೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಸಾರ್ವಜನಿಕ ಸಭೆ, ಸಮಾರಂಭಗಳ ಜತೆಗೆ ಹುಲಿಗೆಮ್ಮ ದೇವಿ ದೇವಸ್ಥಾನ, ಗವಿಸಿದ್ದೇಶ್ವರ ಮಠ, ಖಾಜಾ ಬಂದೇ ನವಾಜ್ ದರ್ಗಾ ಹಾಗೂ ಅನುಭವ ಮಂಟಪಕ್ಕೆ ಭೇಟಿ ಕೊಡಲಿದ್ದಾರೆ.
ಫೆ.10ರಂದು ರಾಹುಲ… ಹೊಸಪೇಟೆಯಲ್ಲಿ ಸಮಾವೇಶ ನಡೆಸಿ, ಬಸ್‌ನಲ್ಲಿ ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾರ್ಗ ಮಧ್ಯೆ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೂ ಭೇಟಿ ಕೊಟ್ಟು, ಬಳಿಕ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಕುಕನೂರಿನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಅಂದು ರಾತ್ರಿ ಕುಕನೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಫೆ.11ರಂದು ಬಸ್ ಮೂಲಕ ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿಗೆ ಭೇಟಿ ಕೊಟ್ಟು, ಕಾರಟಗಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಂಚಿನಾಳ ಕ್ಯಾಂಪ್‌ನಲ್ಲಿ ಜನರನ್ನು ಭೇಟಿ ಮಾಡಲಿದ್ದಾರೆ. ಸಿಂಧನೂರಿನಲ್ಲಿ ರೈತರೊಂದಿಗೆ ಸಂವಾದ ನಡೆಸುವ ರಾಹುಲ್, ರಾಯಚೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ.12ರಂದು ರಾಯಚೂರು, ಕಲ್ಮಲ ಭೇಟಿ, ದೇವದುರ್ಗದಲ್ಲಿ ಆದಿವಾಸಿಗಳ ರ್ಯಾಲಿ, ಜೇವರ್ಗಿಯಲ್ಲಿ ಸಾರ್ವಜನಿಕ ಸಭೆ, ಸಂಜೆ ಕಲಬುರಗಿಯಲ್ಲಿ ಸಾರ್ವಜನಿಕ ಸಭೆ ನಡೆಸಿ, ಖಾಜಾ ಬಂದೇ ನವಾಜ್ ದರ್ಗಾಗೆ ಭೇಟಿ ಕೊಡಲಿದ್ದಾರೆ.
ಫೆ.13ರಂದು ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಮನೆಗೆ ಭೇಟಿ ನೀಡಲಿರುವ ರಾಹುಲ್, ಬಳಿಕ ಎಚ್.ಕೆ.ಸೊಸೈಟಿಯಲ್ಲಿ ವಾಣಿಜ್ಯೋದ್ಯಮಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣಕ್ಕೆ ತೆರಳಿ, ಅನುಭವ ಮಂಟಪಕ್ಕೆ ಭೇಟಿ ಕೊಟ್ಟು, ಅಲ್ಲಿಂದ ಹೈದರಾಬಾದ್‌ಗೆ ಪ್ರಯಾಣ ಬೆಳಸಲಿದ್ದಾರೆ.
ಅದೇ ರೀತಿ, ಫೆ.21ರಿಂದ ಮೂರು ದಿನಗಳ ಕಾಲ ರಾಹುಲ್ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ಚರ್ಚಿಸಲು ಸೋಮವಾರ ಮುಂಬೈ ಕರ್ನಾಟಕ ಭಾಗದ ಮುಖಂಡರ ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.