Advertisement

ಸದನದಲ್ಲಿ ಬಿಎಸ್‌ವೈ ಬಹುಮತ ಸಾಬೀತು ನಿಶ್ಚಿತ: ಬಿಜೆಪಿ ವಿಶ್ವಾಸ

11:30 AM May 17, 2018 | Team Udayavani |

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಗುರುವಾರ ಬೆಳಗ್ಗೆ ಪ್ರಮಾಣ ವಚನ 
ಸ್ವೀಕರಿಸಿರುವ ಬಿ ಎಸ್‌ ಯಡಿಯೂರಪ್ಪ ಅವರು ಸದನದಲ್ಲಿ ತಮಗೆ ಬಹುಮತ ಇರುವುದನ್ನು ಅನಾಯಾಸವಾಗಿ ಸಾಬೀತಪಡಿಸಲಿದ್ದಾರೆ ಎಂಬ ವಿಶ್ವಾಸವನ್ನು ಆಳುವ ಬಿಜೆಪಿ ವ್ಯಕ್ತಪಡಿಸಿದೆ. 

Advertisement

ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಅನಂತ ಕುಮಾರ್‌ ಅವರು “ರಾಜ್ಯಪಾಲರ ನಿರ್ಧಾರದ ಹಿಂದೆ ಎಲ್ಲ ಪೂರ್ವ ನಿದರ್ಶನಗಳಿವೆ ಎಂದು ನಾನು ಭಾವಿಸುತ್ತೇನೆ; ಹಾಗೆಯೇ ನಾವು ಸದನದಲ್ಲಿ ನಮಗಿರುವ ಬಹುಮತವನ್ನು ಸಾಬೀತುಪಡಿಸುತ್ತೇವೆ” ಎಂದು ವಿಶ್ವಾಸದಿಂದ ಹೇಳಿದರು. 

”ಅತೀ ಹೆಚ್ಚು ಸಂಖ್ಯೆಯ ಸೀಟುಗಳನ್ನು ಗೆದ್ದಿರುವ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ನೂತನ ಸರಕಾರ ರಚಿಸುವುದನ್ನು ಕಾಂಗ್ರೆಸ್‌ ವಿರೋಧಿಸುತ್ತಿರುವುದನ್ನು” ಅವರು ಖಂಡಿಸಿದರು. 

“ಕಾಂಗ್ರೆಸ್‌ ನವರು ನಿಜಕ್ಕೂ ಪ್ರತಿಭಟಿಸಲು ಬಯಸುವುದಾದರೆ ಅವರು ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು  ಸಿದ್ಧರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಬೇಕು; ಏಕೆಂದರೆ ಈ ಮೂವರೂ ಕಾಂಗ್ರೆಸ್‌ ಪಕ್ಷವನ್ನು ನಾಶಪಡಿಸಿದ್ದಾರೆ” ಎಂದು ಕೇಂದ್ರ ಸಚಿವರಾಗಿರುವ ಅನಂತ ಕುಮಾರ್‌ ಹೇಳಿದರು. 

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರ ನಿಯೋಗ ವಿಧಾನ ಸೌಧದ ಮುಂದೆ ಪ್ರತಿಭಟಿಸುತ್ತಿರುವಂತೆಯೇ ಬಿಜೆಪಿ ನಾಯಕರಿಂದ ಈ ಹೇಳಿಕೆ ಬಂದಿದೆ. 

Advertisement

ವಿಧಾನಸೌಧದ ಮುಂದಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕರಲ್ಲಿ  ಹಿರಿಯ ನಾಯಕ ಗುಲಾಬ್‌ ನಬಿ ಆಜಾದ್‌, ಅಶೋಕ್‌ ಗೆಹಲೋತ್‌, ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಖ್ಯರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next