Advertisement

ಟೀಮ್‌ ಇಂಡಿಯಾಕ್ಕೆ ಮರಳಿದ ರಾಹುಲ್‌

12:30 AM Feb 16, 2019 | |

ಮುಂಬಯಿ: ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಟೀಮ್‌ ಇಂಡಿಯಾಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರ ವಾರ ಆಸ್ಟ್ರೇಲಿಯ ವಿರುದ್ಧದ ಸರಣಿ ಗಾಗಿ ಪ್ರಕಟಿಸಲಾದ ಟಿ20 ಹಾಗೂ ಏಕದಿನ ತಂಡಗಳೆರಡರಲ್ಲೂ ರಾಹುಲ್‌ ಸ್ಥಾನ ಸಂಪಾದಿಸಿದ್ದಾರೆ. ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ವಿಶ್ರಾಂತಿ ಮುಗಿಸಿದ್ದು, ಮರಳಿ ನೇತೃತ್ವ ವಹಿಸಲು ಸಜ್ಜಾಗಿದ್ದಾರೆ. ಇವರೊಂದಿಗೆ ಪೇಸ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಕೂಡ ವಾಪಸಾಗಿದ್ದಾರೆ.  ಏಕದಿನದ ದ್ವಿತೀಯ ವಿಕೆಟ್‌ ಕೀಪರ್‌ ರೇಸ್‌ನಲ್ಲಿ ರಿಷಬ್‌ ಪಂತ್‌ ಮೇಲುಗೈ ಸಾಧಿಸಿದ್ದು, ದಿನೇಶ್‌ ಕಾರ್ತಿಕ್‌ ಹೊರಬಿದ್ದಿದ್ದಾರೆ. ಕಾರ್ತಿಕ್‌ ಕೇವಲ ಟಿ20 ಸರಣಿಯಲ್ಲಷ್ಟೇ ಅವಕಾಶ ಪಡೆದಿದ್ದಾರೆ. 

Advertisement

ಪಂಜಾಬ್‌ನ ಲೆಗ್‌ಸ್ಪಿನ್ನರ್‌ ಮಾಯಾಂಕ್‌ ಮಾರ್ಕಂಡೆ ಏಕೈಕ ಹೊಸ ಮುಖವಾಗಿದ್ದಾರೆ. ಭಾರತ “ಎ’ ತಂಡದ ಪರ ಆಡುತ್ತಿದ್ದ ಮಾರ್ಕಂಡೆ, ಶುಕ್ರವಾರವಷ್ಟೇ ಪ್ರವಾಸಿ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದರ ಬೆನ್ನಲ್ಲೇ ಅವರು ಟಿ20 ತಂಡಕ್ಕೆ ಆಯ್ಕೆಯಾದರು. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ಗೆವಿಶ್ರಾಂತಿ ನೀಡಿದ್ದರಿಂದ ಮಾರ್ಕಂಡೆ ಅವಕಾಶ ಪಡೆದರು.

ವಿಶ್ವಕಪ್‌ ತಂಡದ ಪ್ರತಿರೂಪ
ಶುಕ್ರವಾರ ಮುಂಬಯಿಯಲ್ಲಿ ಸಭೆ ಸೇರಿದ ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಟಿ20 ಜತೆಗೆ ಏಕದಿನ ಸರಣಿಗಾಗಿ 2 ಪ್ರತ್ಯೇಕ ತಂಡಗಳನ್ನು ಪ್ರಕಟಿಸಿತು. ಒಂದು ತಂಡ ಮೊದಲೆರಡು ಏಕದಿನ ಪಂದ್ಯಗಳಿಗೆ ಸೀಮಿತವಾಗಿದೆ. ಮತ್ತೂಂದು ತಂಡ ಕೊನೆಯ 3 ಏಕದಿನ ಮುಖಾಮುಖೀಗೆ ಮೀಸಲಾಗಿದೆ. ಇದರಲ್ಲಿ ಅಂತಿಮ 3 ಪಂದ್ಯಗಳಿಗಾಗಿ ಆರಿಸಲಾದ ತಂಡ ಮುಂಬರುವ ಏಕದಿನ ವಿಶ್ವಕಪ್‌ ಪಂದ್ಯಾವಳಿಗಾಗಿ ಇಂಗ್ಲೆಂಡಿಗೆ ವಿಮಾನವೇರುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯಪಡಲಾಗಿದೆ. ಮೇ 30ರಂದು ಇಂಗ್ಲೆಂಡ್‌ನ‌ಲ್ಲಿ ಆರಂಭವಾಗಲಿ ರುವ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಭಾರತ ಆಡಲಿ ರುವ ಕೊನೆಯ ಅಂತಾರಾಷ್ಟ್ರೀಯ ಸರಣಿ ಇದಾದ್ದ ರಿಂದ ಆಯ್ಕೆ ಪ್ರಕ್ರಿಯೆ ಹೆಚ್ಚು ಪ್ರಾಮುಖ್ಯ ಪಡೆದಿತ್ತು.

“ಎ’ ತಂಡದಲ್ಲಿ  ಮಿಂಚಿದ ರಾಹುಲ್‌
ಹಾರ್ದಿಕ್‌ ಪಾಂಡ್ಯ ಜತೆಗೆ ಟಿವಿ ಶೋ ವಿವಾದದಲ್ಲಿ ಸಿಲುಕಿ ಸ್ವಲ್ಪ ಸಮಯ ನಿಷೇಧಕ್ಕೊಳಗಾಗಿದ್ದ ಕೆ.ಎಲ್‌. ರಾಹುಲ್‌ ಭಾರತ “ಎ’ ತಂಡವನ್ನು ಪ್ರತಿನಿಧಿಸುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಿದ್ದರು. ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ನೀಡಿದ ಭರವಸೆಯ ಬ್ಯಾಟಿಂಗ್‌ ಪ್ರದರ್ಶನ ಹಾಗೂ ಗೆಲುವಿನ ನಾಯಕತ್ವ ಎನ್ನುವುದು ರಾಹುಲ್‌ ಪುನರಾಗಮನಕ್ಕೆ ವೇದಿಕೆಯಾಗಿ ಪರಿಣಮಿಸಿತು. ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ರಾಹುಲ್‌ 89 ಮತ್ತು 81 ರನ್‌ ಹೊಡೆದು ಫಾರ್ಮ್ ಪ್ರದರ್ಶಿಸಿದ್ದರು.

ಎಡಗೈ ವೇಗಿಗೆಳೇ ಇಲ್ಲ!
ಈ ಎಲ್ಲ ತಂಡಗಳ ಅಚ್ಚರಿಯೆಂದರೆ ಎಡಗೈ ವೇಗಿಗಳೇ ಇಲ್ಲದಿರುವುದು! ಜೈದೇವ್‌ ಉನಾದ್ಕತ್‌ ಮತ್ತು ಖಲೀಲ್‌ ಅಹ್ಮದ್‌ ನಡುವೆ ಯಾರಿಗೆ ಅವಕಾಶ ಎಂಬುದು ಆಯ್ಕೆಗೂ ಮುನ್ನ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ ಇವರಿಬ್ಬರನ್ನೂ ಆಯ್ಕೆ ಸಮಿತಿ ಕಡೆಗಣಿಸಿತು. ಪಂಜಾಬ್‌ ಸೀಮರ್‌ ಸಿದ್ಧಾರ್ಥ್ ಕೌಲ್‌ ಅದೃಷ್ಟ ಖುಲಾಯಿಸಿತು. ಕೌಲ್‌ ಮೊದಲೆರಡು ಏಕದಿನ ಪಂದ್ಯಗಳಿಗಾಗಿ ಕರೆ ಪಡೆದಿದ್ದಾರೆ. ಬಳಿಕ ಇವರು ಭುವನೇಶ್ವರ್‌ ಕುಮಾರ್‌ಗೆ ಜಾಗ ಬಿಟ್ಟುಕೊಡಲಿದ್ದಾರೆ. ಆಯ್ಕೆಯ ಇನ್ನೊಂದು ಅಚ್ಚರಿಯೆಂದರೆ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು!

Advertisement

ತಂಡದ ಮುಖ್ಯಾಂಶಗಳು
1 ನಾಯಕ ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ವಾಪಸ್‌
2 ಸ್ಪಿನ್ನರ್‌ ಮಾಯಾಂಕ್‌ ಮಾರ್ಕಂಡೆಗೆ ತೆರೆದ ಟಿ20 ಬಾಗಿಲು
3 ಏಕದಿನದಿಂದ ಕಾರ್ತಿಕ್‌ ಔಟ್‌, ಪಂತ್‌ ದ್ವಿತೀಯ ಕೀಪರ್‌
4 ರೋಹಿತ್‌, ಧವನ್‌, ಧೋನಿ… ಯಾರಿಗೂ ವಿಶ್ರಾಂತಿ ಇಲ್ಲ
5 ಉನಾದ್ಕತ್‌, ಖಲೀಲ್‌ ಬದಲು ಸಿದ್ಧಾರ್ಥ್ ಕೌಲ್‌ಗೆ ಮಣೆ
6 ಎಲ್ಲಿಗೂ ಸಲ್ಲದ ಆಲ್‌ರೌಂಡರ್‌ ರವೀಂದ್ರ ಜಡೇಜ!
7 ತಂಡದ ಆಯ್ಕೆ ಸಭೆಯಲ್ಲಿ ಹಾಜರಿದ್ದ ಕ್ಯಾಪ್ಟನ್‌ ಕೊಹ್ಲಿ
8 ಅಂತಿಮ 3 ಏಕದಿನ ಪಂದ್ಯಗಳ ತಂಡ ಬಹುತೇಕ ವಿಶ್ವಕಪ್‌ಗೆ

ಭಾರತ ತಂಡಗಳು
ಟಿ20 ಸರಣಿಗೆ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಕೆ.ಎಲ್‌. ರಾಹುಲ್‌, ಶಿಖರ್‌ ಧವನ್‌, ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ಧೋನಿ (ವಿ.ಕೀ.), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ವಿಜಯ್‌ ಶಂಕರ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಸಿದ್ಧಾರ್ಥ್ ಕೌಲ್‌, ಮಾಯಾಂಕ್‌ ಮಾರ್ಕಂಡೆ.

ಮೊದಲೆರಡು ಏಕದಿನ ಪಂದ್ಯಗಳಿಗೆ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ (ವಿ.ಕೀ.), ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ವಿಜಯ್‌ ಶಂಕರ್‌, ರಿಷಬ್‌ ಪಂತ್‌, ಸಿದ್ಧಾರ್ಥ್ ಕೌಲ್‌.

ಕೊನೆಯ 3 ಏಕದಿನ ಪಂದ್ಯಗಳಿಗೆ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ (ವಿ.ಕೀ.),  ವಿಜಯ್‌ ಶಂಕರ್‌, ರಿಷಬ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವ ರ್‌ ಕುಮಾರ್‌, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌.

Advertisement

Udayavani is now on Telegram. Click here to join our channel and stay updated with the latest news.

Next