ಹೊಸದಿಲ್ಲಿ : ವಿವಾದಿತ ಹೇಳಿಕೆಗಳಿಗೆ ಕುಪ್ರಸಿದ್ಧರಾಗಿರುವ ಬಜೆಪಿ ಶಾಸಕ ಸುರೇಂದ್ರ ಸಿಂಗ್, ರಾಹುಲ್ ಗಾಂಧಿ ರಾವಣನೆಂದೂ, ಆತನ ಸಹೋದರಿ ಪ್ರಿಯಾಂಕಾ ಗಾಂಧಿ ಶೂರ್ಪನಖೀ ಎಂದೂ ಲೇವಡಿ ಮಾಡಿದ್ದಾರೆ.
ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರದ ಶಾಸಕರಾಗಿರುವ ಸುರೇಂದ್ರ ಸಿಂಗ್, ‘ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡಗು; ಈಚೆಗೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಬಿಜೆಪಿ ಸೋಲಲು ಎಸ್‌ಸಿ/ಎಸ್‌ಟಿ ಕಾಯಿದೆ ಕಾರಣ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರಾಜಕೀಯ ಘನತೆ ಇಲ್ಲ; ಅದು ದೇಶದಲ್ಲಿ ಬೇರೆಲ್ಲೂ ಇನ್ನು ವಿಜಯ ಗಳಿಸದು’ ಎಂದು ಸಿಂಗ್ ಹೇಳಿದರು.
‘ರಾಮನ ವಿರುದ್ಧ ರಾವಣನು ಯುದ್ಧ ಹೂಡುವ ಮೊದಲು ತನ್ನ ತಂಗಿ ಶೂರ್ಪನಖೀಯನ್ನು ಕಳುಹಿಸಿದ; ಅದೇ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಎಂಬ ರಾವಣನು, ರಾಮನೆಂಬ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡುವ ಮುನ್ನ ಶೂರ್ಪನಖೀ ಎಂಬ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಕಳುಹಿಸಿದ್ದಾನೆ’ ಎಂದು ಸುರೇಂದ್ರ ಸಿಂಗ್ ಹೇಳಿರುವ ಮಾತುಗಳು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಇದೇ ಶಾಸಕ ಸುರೇಂದ್ರ ಸಿಂಗ್ ಈಚೆಗೆ ತನ್ನ ಸಹೋದ್ಯೋಗಿ, ಶಾಸಕಿ ಸಾಧನಾ ಸಿಂಗ್, ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಲಿಂಗಾಂತರಿಗಿಂತಲೂ ಕೆಟ್ಟವಳು’ ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿದ್ದರು.