ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಗೆ ಅಮೇಥಿಯ ಜೊತೆಗೆ ಕೇರಳದ ವಯನಾಡ್ ನಲ್ಲೂ ಸ್ಪರ್ಧಿಸಲಿದ್ದಾರೆ ಎಂದು ಖಚಿತವಾದ ಹಿನ್ನಲೆಯಲ್ಲಿ ರಾಹುಲ್ ನಿರ್ಧಾರಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ, ನಾನು ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸುವ ವಿಷಯ ವಾಟ್ಸಾಪ್ ನೋಡಿ ತಿಳಿದುಕೊಂಡೆ. ರಾಹುಲ್ ಅಮೇಥಿಯನ್ನು ಬಿಟ್ಟು ಕೇರಳಕ್ಕೆ ಯಾಕೆ ಓಡಿದರು? ಅಮೇಥಿಗೆ ಅವರ ಅವಶ್ಯಕತೆ ಇಲ್ಲವೆಂದು ಕಾಣುತ್ತದೆ. ಅದಕ್ಕೆ ಅವರು ಕೇರಳಕ್ಕೆ ಓಡಿದರು ಎಂದು ವ್ಯಂಗ್ಯವಾಡಿದರು.
ರಾಹುಲ್ ನಿರ್ಧಾರದ ಬಗ್ಗೆ ಪ್ರತಿಕ್ರಯಿಸಿದ ಕೇಂದ್ರ ಸಚಿವೆ ಮನೇಕಾ ಗಾಂಧಿ, ಎಲ್ಲಿಂದ ಸ್ಪರ್ಧಿಸಬೇಕೆಂಬುದು ರಾಹುಲ್ ಗೆ ಬಿಟ್ಟ ವಿಷಯ. ಅವರು ಸೋಲಿನ ಭಯದಿಂದ ಕೇರಳಕ್ಕೆ ಓಡಿದ್ದಾರೋ ಅಥವಾ ಇಲ್ಲವೋ ಎಂದು ನನಗೆ ಗೊತ್ತಿಲ್ಲ ಎಂದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಹುಲ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ರಾಹುಲ್ ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಒಂದರಲ್ಲಿ ಸ್ಪರ್ಧೆ ಮಾಡುತ್ತಾರಂತೆ. ನಾವೂ ಅವರ ವಿರುದ್ಧ ಸೂಕ್ತ ಅಭ್ಯರ್ಥಿಯನ್ನು ಹಾಕುತ್ತೇವೆ. ರಾಹುಲ್ ಬಿಜೆಪಿ ಸ್ಪರ್ಧಿಸುವ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು. ಆದರೆ ಅವರು ಈಗ ಎಡ ಪಕ್ಷಗಳ ವಿರುದ್ಧವೇ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
ಸಿಪಿಐಎಂ ನ ಪ್ರಕಾಶ್ ಕಾರಟ್ ಕೂಡಾ ಕಾಂಗ್ರೆಸ್ ನ ಈ ನಡೆಯನ್ನು ವಿರೋಧಿಸಿದ್ದು, ಎಡ ಪಕ್ಷಗಳ ವಿರುದ್ದ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಆಯ್ಕೆ ಮಾಡುವುದನ್ನು ನೋಡಿದರೆ ಕಾಂಗ್ರೆಸ್ ಎಡ ಪಕ್ಷಗಳನ್ನು ಗುರಿಯಾಗಿಸಿ ಕೆಲಸ ಮಾಡುತ್ತಿದೆ. ಅದರ ಬಿಜೆಪಿ ವಿರೋಧಿ ನೀತಿ ಬದಲಾಗಿ ಬಿಜೆಪಿಯನ್ನು ವಿರೋಧಿಸುವ ಎಡ ಪಕ್ಷಗಳನ್ನೇ ವಿರೋಧಿಸುವಂತಿದೆ ಎಂದು ವಿರೋಧ ವ್ಯಕ್ತಪಡಿಸಿದರು.