Advertisement

Rahul Gandhi ಭೇಟಿ ಯಾವುದೇ ಪರಿಣಾಮ ಬೀರದು: ಬಿಎಸ್‌ವೈ

01:07 AM May 04, 2024 | Team Udayavani |

ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರವಾಸ, ಸಮಾವೇಶಗಳಿಂದ ಬಿಜೆಪಿಯ ಮೇಲೆ ಯಾವುದೇ ರೀತಿಯಾದ ಪರಿಣಾಮ ಬೀರುವುದಿಲ್ಲ. ರಾಜ್ಯದ ಉದ್ದಗಲಕ್ಕೂ ನಾನು ಪ್ರವಾಸ ಮಾಡಿದ್ದು, ಎಲ್ಲೆಡೆ ಬಿಜೆಪಿ ಪರವಾದ ಹಾಗೂ ಮೋದಿ ಅಲೆ ಎದ್ದಿದೆ. ಎಲ್ಲ 28 ಕ್ಷೇತ್ರಗಳಲ್ಲಿಯೂ ನಾವು ಗೆಲುವು ಸಾಧಿಸಲಿದ್ದು, ದೇಶದಲ್ಲಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆದ್ದು, ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಬೈಂದೂರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರ ಯಡ್ತರೆ, ಬೈಂದೂರು, ಉಪ್ಪುಂದದಲ್ಲಿ ನಡೆದ ಬೃಹತ್‌ ರೋಡ್‌ ಶೋ ಹಾಗೂ ಬೈಕ್‌ ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಶಿವಮೊಗ್ಗ ಕ್ಷೇತ್ರದಿಂದ ರಾಘವೇಂದ್ರ ಕನಿಷ್ಠ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಲಿದ್ದಾರೆ. ಬೈಂದೂರಿನಿಂದ 75 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಬರುವ ವಿಶ್ವಾಸವಿದೆ. ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ತನಿಖೆಗೆ ಬಿಜೆಪಿ ಅಡ್ಡಿಪಡಿಸದು: ಅಣ್ಣಾಮಲೈ
ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣದಲ್ಲಿ ಬಿಜೆಪಿಯು ಯಾವುದೇ ತನಿಖೆಗೆ ಅಡ್ಡಿಪಡಿಸುವುದಿಲ್ಲ. ಈ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರೇ ವಿವರವಾಗಿ ಹೇಳಿದ್ದಾರೆ. ಬಿಜೆಪಿಯು ತನ್ನದೇ ಆದ ದಾರಿಯಲ್ಲಿ ಹೋಗುತ್ತಿದ್ದು, ಈ ಪ್ರಕರಣದಿಂದ ಯಾವುದೇ ರೀತಿಯ ಹಿನ್ನಡೆ ಆಗದು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಹತಾಶೆಗೊಂಡಿದೆ
ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹತಾಶಗೊಂಡಿದ್ದು, ಅವರಿಗೆ ಸೋಲಿನ ಭಯ ಕಾಡಲಾರಂಭಿಸಿದೆ. ಅದಕ್ಕಾಗಿಯೇ ರಾಹುಲ್‌ ಗಾಂಧಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬಿ.ವೈ. ರಾಘವೇಂದ್ರ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಈ ದೊಡ್ಡ ಅಂತರ ನೋಡಿ ರಾಹುಲ್‌ ಗಾಂಧಿ ಶಿವಮೊಗ್ಗದಲ್ಲಿ ಸಮಾವೇಶ ನಡೆಸಿದ್ದಾರೆ. ಅವರ ಆ ಕಾರ್ಯಕ್ರಮದಲ್ಲಿ ಆದ ಕಾಮಿಡಿಯನ್ನು ನಾವು ನೋಡಿದ್ದೇವೆ. ಭಾಷಾಂತರವನ್ನು ಸಹ ಅರ್ಧಕ್ಕೆ ನಿಲ್ಲಿಸಿ ಕಳುಹಿಸಿದ್ದಾರೆ ಎಂದವರು ವ್ಯಂಗ್ಯವಾಡಿದರು.

Advertisement

ಕೊಲ್ಲೂರು ಕಾರಿಡಾರ್‌
ಕೇಂದ್ರದ ಆಡಳಿತದ ಬಗ್ಗೆ ಜನರಿಗೆ ಗೊತ್ತು. ದಕ್ಷಿಣ ಭಾರತದಲ್ಲೂ ಟೆಂಪಲ್‌ ಕಾರಿಡಾರ್‌ ಆಗಬೇಕಾಗಿದೆ. ವಾರಣಾಸಿ, ಉಜ್ಜೆನಿ, ಅಯೋಧ್ಯೆ ಎಲ್ಲ ಕಡೆ ಟೆಂಪಲ್‌ ಕಾರಿಡಾರ್‌ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಕೊಲ್ಲೂರು ಕಾರಿಡಾರ್‌ ಮಾಡುವ ಸಮಯ ಬಂದಿದೆ. ಪ್ರಧಾನಿ ಮೋದಿ ಅವರನ್ನೇ ಕೊಲ್ಲೂರಿಗೆ ಕರೆದುಕೊಂಡು ಬರಬೇಕು. ಮೂಕಾಂಬಿಕಾ ದೇವಿಯ ದರ್ಶನ ಮಾಡಬೇಕು ಎಂದು ಜನ ಬಯಸಿದ್ದಾರೆ. ಖಂಡಿತವಾಗಿಯೂ ಕೊಲ್ಲೂರು ಕಾರಿಡಾರ್‌ ಆಗಿಯೇ ಆಗುತ್ತದೆ. ಈ ದೇವಿಯ ಸನ್ನಿಧಾನವು ಅಂತಾರಾಷ್ಟ್ರೀಯ ಕೇಂದ್ರವಾಗಿ ರೂಪುಗೊಳ್ಳಲಿದೆ. ನಮ್ಮ ಕೈಯಲ್ಲಿ ಖಚಿತವಾದ ಯೋಜನೆ ಇದೆ. ನಾವು ಕಾರಿಡಾರ್‌ ಮಾಡಿಯೇ ಮಾಡುತ್ತೇವೆ ಎಂದು ಅಣ್ಣಾಮಲೈ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ನಟಿ ತಾರಾ, ಮಾಜಿ ಶಾಸಕ ಲಾಲಾಜಿ ಮೆಂಡನ್‌, ಪ್ರಮುಖರಾದ ಕ್ಯಾ| ಬ್ರಿಜೇಶ್‌ ಚೌಟ, ದೀಪಕ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next