Advertisement

ಮಿಂಚಿನ ಸಂಚಲನ ರಾಗಾ ಪಯಣ!

07:30 AM Mar 21, 2018 | |

ಮಂಗಳೂರು: ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್‌ ಕಾರ್ಯ ಕರ್ತರು. ಜನಾಶೀರ್ವಾದ ಯಾತ್ರೆಯ ಬಸ್‌ನಲ್ಲಿ ಪ್ರಯಾಣಿ ಸುತ್ತ ತಮ್ಮತ್ತ ನೋಡಿ ಕೈಬೀಸುತ್ತಿದ್ದ ಅಭಿಮಾನಿಗಳನ್ನು ಕಂಡಾಗ ಇಳಿದು ಅವರತ್ತ ತೆರಳಿ ಕೈ ಕುಲುಕಿ, ನಮಸ್ಕರಿಸಿ ಕೈಬೀಸುತ್ತಿದ್ದರು. ಮತ್ತೆ ಬಸ್ಸೇರಿ ಮುಂದೆ ಸಾಗಿ ಮತ್ತೂಂದು ಜಾಗದಲ್ಲಿ ಕಾದು ನಿಂತಿದ್ದ ಕಾರ್ಯಕರ್ತರ ಬಳಿ ಮತ್ತದೇ ಶೈಲಿಯಲ್ಲಿ ಜನಾಶೀರ್ವಾದ ಪಡೆಯುತ್ತಿದ್ದರು.

Advertisement

ಮೂಲ್ಕಿಯಿಂದ ಮಂಗಳೂರು ನಗರದ ವರೆಗೆ ಮಂಗಳವಾರ ನಡೆದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್‌ ನಾಯಕರು, ಮುಖಂಡರೊಂದಿಗೆ ನಡೆಸಿದ 3ನೇ ಹಂತದ “ಜನಾಶೀರ್ವಾದ ಯಾತ್ರೆ’ಯಲ್ಲಿ ಕಂಡುಬಂದ ಚಿತ್ರಣವಿದು.

3.35ರ ಸುಮಾರಿಗೆ ಮೂಲ್ಕಿಗೆ ತಮ್ಮ ಜನಾಶೀರ್ವಾದ ಯಾತ್ರೆ ಬಸ್‌ನಲ್ಲಿ ಆಗಮಿಸಿದ ರಾಹುಲ್‌ ಬಸ್‌ನಿಂದ ಇಳಿದು ಪೊಲೀಸ್‌ ಭದ್ರತೆಯನ್ನು ಭೇದಿಸಿ ರಸ್ತೆ ಬದಿ ಕಾದಿದ್ದ ಕಾರ್ಯಕರ್ತರತ್ತ ಕೈಬೀಸಿದರು. ರಸ್ತೆಯ ಎರಡೂ ಬದಿಯಲ್ಲಿದ್ದ ಸಾವಿರಾರು ಕಾರ್ಯಕರ್ತರತ್ತ ಕೈಬೀಸಿ ಮತ್ತೆ ಬಸ್ಸೇರಿ ಫುಟ್‌ಬೋರ್ಡ್‌ನಲ್ಲಿ ನಿಂತು ಮತ್ತೂಮ್ಮೆ ಕೈ ಬೀಸಿದರು. ರಾಹುಲ್‌ ಗಾಂಧಿ, ಹಸ್ತದ ಚಿಹ್ನೆ ಹಾಗೂ ಕಾಂಗ್ರೆಸ್‌ಗೆ ನಮ್ಮ ಮತ ಎಂಬ ಒಕ್ಕಣೆಯ ಬಣ್ಣದೊಂದಿಗೆ ಹುಲಿವೇಷ ಪ್ರದರ್ಶನ, ಚೆಂಡೆ, ವಾದ್ಯ ಹಾಗೂ ಕೊಂಬುಗಳ ಸ್ವಾಗತವು ಗಮನ ಸೆಳೆದವು. ಕಾರ್ಯಕರ್ತರಿಗೆ ಊಟ ಹಾಗೂ ಚಟ್ನಿಯ ವ್ಯವಸ್ಥೆ ಮಾಡಲಾಗಿತ್ತು.

ರಾಹುಲ್‌ ಆಗಮನದ ಸ್ವಲ್ಪ ಹೊತ್ತಿಗೆ ಮುನ್ನ ಮೂಲ್ಕಿ- ಸುರತ್ಕಲ್‌ ಹೆದ್ದಾರಿ ಬದಿಯ ಪೊದೆಯಲ್ಲಿ ಬೆಂಕಿ ಕಾಣಿಸಿ ಕೊಂಡು ಆತಂಕದ ವಾತಾವರಣ ನಿರ್ಮಾಣ ವಾಯಿತು. ತತ್‌ಕ್ಷಣವೇ ಅಲ್ಲಿಗೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಬೆಂಕಿ ಆರಿಸಿದರು. ಸಂಜೆ ಸುಮಾರು 4.10ಕ್ಕೆ ಸುರತ್ಕಲ್‌ಗೆ ಆಗಮಿಸಿದ ರಾಹುಲ್‌ ಗಾಂಧಿ ಸ್ವಲ್ಪ ಹೊತ್ತು ಕಾರ್ಯಕರ್ತರ ಜತೆಗೆ ಬೆರೆತರು. ಬಳಿಕ ವೇದಿಕೆಗೆ ತೆರಳಿ ಸಭೆಯಲ್ಲಿ ಭಾಗವಹಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯ ಮುಂಭಾಗದ ಬ್ಯಾರಿಕೇಡ್‌ಗಳ ಸಮೀಪಕ್ಕೆ ಬಂದು ಕಾರ್ಯಕರ್ತರಿಗೆ ಕೈಬೀಸಿದರು.

ಬೆಂಗಳೂರಿನಿಂದ ಆಗಮಿಸಿದ ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಯ ಬಸ್‌ನಲ್ಲಿಯೇ ರಾಹುಲ್‌ ಗಾಂಧಿ ಮಂಗಳೂರಿ ನಾದ್ಯಂತ ಸುತ್ತಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಸಹಿತ ಕಾಂಗ್ರೆಸ್‌ನ ಬಹುತೇಕ ಎಲ್ಲ ಮುಖಂಡರು ಬಸ್‌ನಲ್ಲಿಯೇ ಇದ್ದರು. 

Advertisement

ಕಲಾ ತಂಡಗಳ ಜತೆಗೆ ರಾಹುಲ್‌ ಪಯಣ
ನಗರದ ಅಂಬೇಡ್ಕರ್‌ ಸರ್ಕಲ್‌ನಿಂದ ನೆಹರೂ ಮೈದಾನದ ವರೆಗೆ ನಡೆದ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಮೆರವಣಿಗೆಯ ಮುಂಭಾಗದಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತ್ತು. ಕೇರಳದ ಚೆಂಡೆ ಬಳಗ, ಕಲ್ಲಡ್ಕದ ಶಿಲ್ಪಕಲಾ ಗೊಂಬೆ ಬಳಗ, ಬ್ಯಾಂಡ್‌ಸೆಟ್‌, ಹುಲಿವೇಷ, ನಾಸಿಕ್‌ ಬ್ಯಾಂಡ್‌, ಕೊಂಬು-ಜಾಗಟೆ  ಮೆರವಣಿಗೆಯಲ್ಲಿದ್ದವು. ಕಾರ್ಯಕರ್ತರು ಹುಲಿವೇಷ-ನಾಸಿಕ್‌ ಬ್ಯಾಂಡ್‌ನೊಂದಿಗೆ ಕುಣಿಯುತ್ತಾ ಸಾಗಿದರು. ಯಾತ್ರೆಯ ತೆರೆದ ಬಸ್ಸಿನಲ್ಲಿ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಾ| ಜಿ. ಪರಮೇಶ್ವರ್‌ ಅವರು ಕಾರ್ಯಕರ್ತರತ್ತ ಕೈ ಬೀಸುತ್ತಾ, ವಿಜಯದ ಸಂಕೇತ ಸೂಚಿಸುತ್ತಾ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು. ರಾತ್ರಿ 8.50ರ ಸುಮಾರಿಗೆ ರಾಹುಲ್‌ ನಗರದ ರೊಸಾರಿಯೊ ಕೆಥೆಡ್ರಲ್‌, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಉಳ್ಳಾಲ ದರ್ಗಾಗಳಿಗೆ ಭೇಟಿ ನೀಡಿದರು. 

ರಾಗಾ ಪಯಣ; ರಸ್ತೆಯೆಲ್ಲ ಬ್ಲಾಕ್‌!
ರಾಹುಲ್‌ ಗಾಂಧಿ ಮೂಲ್ಕಿ ಪ್ರವೇಶಕ್ಕಿಂತ 10 ನಿಮಿಷ ಮುನ್ನವೇ ರಾ.ಹೆ.ಯ ಒಂದು ಬದಿಯ ಸಂಚಾರಕ್ಕೆ ಬ್ರೇಕ್‌ ಹಾಕಲಾಯಿತು. ಪರಿಣಾಮವಾಗಿ ಸಂಚಾರ ದಟ್ಟಣೆ ಕಾಣಿಸತೊಡಗಿತು. ರಾಹುಲ್‌ ಮೂಲ್ಕಿಗೆ ಆಗಮಿಸುತ್ತಿದ್ದಂತೆ ಎಲ್ಲ ಕಡೆ ಸಂಚಾರಕ್ಕೆ ಬ್ರೇಕ್‌ ಹಾಕಲಾಯಿತು. ಸುರತ್ಕಲ್‌ನತ್ತ ಸಾಗುವಾಗಲೂ ಹೆದ್ದಾರಿಯಲ್ಲೂ ಮತ್ತದೇ ಸಮಸ್ಯೆ ಕಾಣಿಸಿತು. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮುಂದೆ ಸಾಗಲು ಕಷ್ಟಪಟ್ಟರೆ, ಒಳರಸ್ತೆಗಳಿಂದ ಸುರತ್ಕಲ್‌ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಸುರತ್ಕಲ್‌ನ ಫ್ಲೆ ಓವರ್‌ ಮೇಲೆಯೂ ವಾಹನ ನಿಲ್ಲಿಸಿದ್ದರಿಂದ ಅಲ್ಲಿಯೂ ರಸ್ತೆ ತಡೆ ಉಂಟಾಯಿತು. 

ಬಳಿಕ ರಾಹುಲ್‌ ಸಕೀìಟ್‌ ಹೌಸ್‌ಗೆ ತೆರಳಿದ ಪರಿಣಾಮ ಆ ಪರಿಸರದಲ್ಲಿಯೂ ಕೆಲವು ನಿಮಿಷ ಅಧಿಕ ವಾಹನಗಳ ಒತ್ತಡದಿಂದಾಗಿ ಸಂಚಾರ ದಟ್ಟಣೆ ಉಂಟಾಯಿತು. ನಗರದ ಅಂಬೇಡ್ಕರ್‌ ಸರ್ಕಲ್‌ನಿಂದ ನೆಹರೂ ಮೈದಾನಕ್ಕೆ ಯಾತ್ರೆ ತೆರಳುವಾಗಲೂ ನಗರದ ವ್ಯಾಪ್ತಿಯ ಬಹುತೇಕ ಭಾಗದಲ್ಲಿ ಸಂಚಾರ ದಟ್ಟಣೆ ಎದುರಾಗಿ, ವಾಹನ ಸವಾರರು ಪರದಾಡಿದರು. ಬಳಿಕ ಅವರ ದೇವಾಲಯಗಳ ಪ್ರಯಾಣದ ಕಾರಣದಿಂದಾಗಿಯೂ ನಗರದ ಕೆಲವು ರಸ್ತೆಗಳಲ್ಲಿ ಟ್ರಾಫಿಕ್‌ ಜ್ಯಾಮ್‌ ಉಂಟಾಯಿತು.

ಎಲ್ಲೆಡೆ ಕಾಂಗ್ರೆಸ್‌ಮಯ!
ರಾಗಾ ಮಂಗಳೂರು ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಅದ್ದೂರಿ ಸಿದ್ಧತೆ ಮಾಡಲಾಗಿತ್ತು. ಮೂಲ್ಕಿಯಿಂದ ಆರಂಭವಾಗಿ ಉಳ್ಳಾಲದ ವರೆಗೂ ಕಾಂಗ್ರೆಸ್‌ ಬಾವುಟ, ಫ್ಲೆಕ್ಸ್‌, ದ್ವಾರ, ಬ್ಯಾನರ್‌, ಪೋಸ್ಟರ್‌ಗಳನ್ನು ಅಲ್ಲಲ್ಲಿ ಅಳವಡಿಸಿ ಸ್ವಾಗತ ಕೋರಲಾಗಿತ್ತು. ಹೆದ್ದಾರಿಯಲ್ಲಿ ಕಾಂಗ್ರೆಸ್‌ ಬಾವುಟ ಹಾಕಲಾಗಿತ್ತು. ಡಿವೈಡರ್‌ಗಳಲ್ಲೂ ಬ್ಯಾನರ್‌ಗಳು ರಾರಾಜಿಸಿದವು. ಸರ್ಕಲ್‌ಗ‌ಳನ್ನು ಪೂರ್ಣವಾಗಿ ಕಾಂಗ್ರೆಸ್‌ಮಯವಾಗಿ ಪರಿವರ್ತಿಸಲಾಗಿತ್ತು. 

    ಮೂಲ್ಕಿಯಲ್ಲಿ ರಾಹುಲ್‌ ಚಿತ್ರ ಬರೆಸಿಕೊಂಡಿರುವ ಹುಲಿ ವೇಷಧಾರಿಯಿಂದ ಸ್ವಾಗತ
    ಮೂಲ್ಕಿಯಲ್ಲಿ ಕಾರ್ಯಕರ್ತರಿಗೆ ಊಟ-ಚಟ್ನಿ
    ಶಾಸಕ ಬಾವಾ ಭಾಷಣದಲ್ಲಿ ರಾಹುಲ್‌ ಅವರನ್ನು “ಭಾವೀ ಮುಖ್ಯಮಂತ್ರಿ’ ಎಂದು ಹೇಳಿ ಪೇಚಿಗೆ ಸಿಲುಕಿ, ತತ್‌ಕ್ಷಣವೇ “ಭಾವೀ ಪ್ರಧಾನಿ’ ಎಂದು ತಿದ್ದಿಕೊಂಡರು.
    “ನಿಕ್ಲೆಗ್‌ ಎನ್ನ ನಮಸ್ಕಾರ’ ಎಂದು ಸುರತ್ಕಲ್‌ನಲ್ಲಿ ಮಾತು ಆರಂಭಿಸಿದ ರಾಹುಲ್‌
    ಸುರತ್ಕಲ್‌ನಲ್ಲಿ  ರೈ ಹೆಸರು ಮರೆತ ರಾಹುಲ್‌
    ರಾಹುಲ್‌ ಜನಾಶೀರ್ವಾದ ಯಾತ್ರೆಯ ಸುದ್ದಿ ಪ್ರಸಾರಕ್ಕಾಗಿ ಬೆಂಗಳೂರು, ಹೊಸದಿಲ್ಲಿಯಿಂದ ಎರಡು ಬಸ್‌ಗಳಲ್ಲಿ ಬಂದಿದ್ದ ಅಪಾರ ಸಂಖ್ಯೆ ಮಾಧ್ಯಮ ಪ್ರತಿನಿಧಿಗಳು

ರಾಹುಲ್‌ಗೆ ಕವಿತಾ ತುಳು ಪಾಠ !
ಮಂಗಳೂರು: ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಜನಾಶೀರ್ವಾದ ಯಾತ್ರೆ ಸಮಾವೇಶದ ಸಂದರ್ಭ ಮಾಜಿ ಮೇಯರ್‌ ಕವಿತಾ ಸನಿಲ್‌ ಅವರು ರಾಹುಲ್‌ ಗಾಂಧಿ ಅವರಿಗೆ ತುಳು ಸಂಭಾಷಣೆಯನ್ನು ಹೇಳಿಕೊಟ್ಟರು.

ನಡುವೆ ಒಂದು ಗಂಟೆ ವಿಶ್ರಾಂತಿ ಪಡೆದ ರಾಹುಲ್‌ಗಾಂಧಿ
ಮಂಗಳೂರು: ಬೆಳಗ್ಗೆ ನೇರವಾಗಿ ಪಡುಬಿದ್ರಿಗೆ ತೆರಳಿದ ರಾಹುಲ್‌ ಗಾಂಧಿ ಅವರು ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ಸಕೀಟ್‌ ಹೌಸ್‌ಗೆ ತೆರಳಿ ಸ್ನಾನ ಮುಗಿಸಿ ಸುಮಾರು ಒಂದು ತಾಸು ವಿಶ್ರಾಂತಿ ಪಡೆದರು. ಸುರತ್ಕಲ್‌ನಿಂದ ನೇರವಾಗಿ ಮಂಗಳೂರಿನ ಅಂಬೇಡ್ಕರ್‌ ಸರ್ಕಲ್‌ನಿಂದ ಆಯೋಜಿಸಿದ್ದ ಮೆರವಣಿಗೆಗೆ ತೆರಳಬೇಕಾಗಿದ್ದ ರಾಹುಲ್‌ ಗಾಂಧಿ ಅವರು ನಡುವೆ ಸಕೀìಟ್‌ ಹೌಸ್‌ಗೆ ಹೋದರು. ಅಲ್ಲಿ ಸ್ನಾನ, ವಿಶ್ರಾಂತಿ ಬಳಿಕ ಮೆರವಣಿಗೆಯಲ್ಲಿ ಭಾಗವಹಿಸಿ, ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಬಳಿಕ ದೇವಸ್ಥಾನ, ಚರ್ಚ್‌, ಮಸೀದಿಗೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next