Advertisement

Lok Sabha Election: ನಾಮಪತ್ರ ಸಲ್ಲಿಸಿದ ರಾಹುಲ್… ಆಸ್ತಿಯಲ್ಲಿ 4 ಕೋಟಿ ಹೆಚ್ಚಳ

10:09 AM Apr 04, 2024 | Team Udayavani |

ವಯನಾಡ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಕೇರಳದ ವಯನಾಡ್‌ ಲೋಕಸಭೆ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ, ಅವರು 20 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದು, ಐದು ವರ್ಷದಲ್ಲಿ 4 ಕೋಟಿ ರೂ. ಹೆಚ್ಚಳವಾಗಿದೆ. 2019ರಲ್ಲಿ 16 ಕೋಟಿ ರೂ. ಆಸ್ತಿ ಘೋಷಿಸಿದ್ದರು.

Advertisement

ನಾಮಪತ್ರ ಸಲ್ಲಿಕೆ ವೇಳೆ ಸಹೋದರಿಯೂ ಆಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ.ವೇಣುಗೋಪಾಲ್‌ ಸೇರಿ ಹಿರಿಯ ನಾಯಕರು ಈ ವೇಳೆ ಹಾಜರಿದ್ದರು.

ಬುಧವಾರ ಕಾಪ್ಟರ್‌ ಮೂಲಕ ಆಗಮಿಸಿದ ರಾಹುಲ್‌ ಗಾಂಧಿ ಅವರು, ನಾಮಪತ್ರ ಸಲ್ಲಿಕೆಗೆ ಮುನ್ನ ವಯನಾಡಿನ ಕಲ್ಪೆಟ್ಟಾದಲ್ಲಿ ರೋಡ್‌ ಶೋ ನಡೆಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ರೋಡ್‌ ಶೋ ಮುಕ್ತಾಯ ಸ್ಥಳದಲ್ಲಿ ಮಾತನಾಡಿದ ರಾಹುಲ್‌, ಮಾನವ-ಪ್ರಾಣಿ ಸಂಘರ್ಷ ಸೇರಿದಂತೆ ವಯನಾಡಿನ ಎಲ್ಲ ಜನರ ಎಲ್ಲ ಸಮಸ್ಯೆಗಳ ಜತೆ ನಾನಿದ್ದೇನೆ. ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ದೇಶ ಮತ್ತು ವಿದೇಶದ ಗಮನಸೆಳೆಯುವಂತೆ ಮಾಡುವೆ ಎಂದು ಹೇಳಿದರು. ವಯನಾಡಿನ ಹಾಲಿ ಸಂಸದರಾಗಿರುವ ರಾಹುಲ್‌ ಗಾಂಧಿ ಅವರು 2019ರ ಚುನಾವಣೆಯಲ್ಲಿ 7,06,367 ಮತ ಪಡೆದು ಗೆಲುವು ಸಾಧಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ರಾಹುಲ್‌ ಗಾಂಧಿಗೆ ಎದುರಾಗಿ ಸಿಪಿಐನಿಂದ ಅನ್ನಿ ರಾಜಾ ಮತ್ತು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಅವರು ಕಣದಲ್ಲಿದ್ದಾರೆ.

ರಾಗಾ ಆಸ್ತಿ 20 ಕೋಟಿ
ರಾಹುಲ್‌ ಗಾಂಧಿ ಅಂದಾಜು 20 ಕೋ. ರೂ. ಗೂ ಅಧಿಕ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. 2019ರ ಚುನಾವಣೆ ವೇಳೆ 16 ಕೋಟಿ ರೂ. ಆಸ್ತಿ ಘೋಷಿ ಸಿದ್ದರು. ಅಂದರೆ ಕಳೆದ 5 ವರ್ಷದಲ್ಲಿ 4 ಕೋಟಿ ರೂ. ಹೆಚ್ಚಾಗಿದೆ. ರಾಹುಲ್‌ 20 ಕೋಟಿ ರೂ. ಆಸ್ತಿಯು ಅವರ ಷೇರು ಮತ್ತು ಮ್ಯೂಚುವಲ್‌ ಫ‌ಂಡ್‌ ಇತ್ಯಾದಿ ಹೂಡಿಕೆಯ ಮೌಲ್ಯವು 9.24 ಕೋಟಿ ರೂ. ಹಾಗೂ 11.15 ಕೋಟಿ ರೂ. ಸ್ಥಿರಾಸ್ತಿ ಒಳಗೊಂಡಿದೆ. 2022-23ರ ವಿತ್ತ ಸಾಲಿನಲ್ಲಿ 1.02 ಕೋ.ರೂ. ಆದಾಯ ಬಂದಿದೆ. ಕೈಯಲ್ಲಿ 55 ಸಾವಿರ ರೂ. ನಗದು ಹಾಗೂ ಬ್ಯಾಂಕ್‌ ಖಾತೆಯಲ್ಲಿ 26 ಲಕ್ಷ ರೂ. ಇದೆ. ಷೇರುಗಳಲ್ಲಿ 4.33 ಕೋಟಿ ರೂ. ಹಾಗೂ ಮ್ಯೂಚವಲ್‌ ಫ‌ಂಡ್‌ಗಳಲ್ಲಿ 3.81 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಕಮರ್ಶಿಯಲ್‌ ಬಿಲ್ಡಿಂಗ್‌, ಕೃಷಿ ಮತ್ತು ಕೃಷಿಯೇತರ ಜಮೀನು ಹೊಂದಿದ್ದಾರೆ.

ಸಿಪಿಐ ಅಭ್ಯರ್ಥಿ ಆಸ್ತಿ: ರಾಹುಲ್‌ ವಿರುದ್ಧ ಸ್ಪರ್ಧಿಸಿರುವ ಅನ್ನಿ ರಾಜಾ ಕೈಯಲ್ಲಿ 10 ಸಾವಿರ ರೂ. ನಗದು, 25 ಸಾವಿರ ರೂ. ಮೌಲ್ಯದ ಚಿನ್ನಾಭರಣ, 62 ಸಾವಿರ ಬ್ಯಾಂಕ್‌ ಠೇವಣಿ ಮತ್ತು 71 ಲಕ್ಷ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಘೋಷಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next