Advertisement

ರಾಹುಲ್‌ ಗಾಂಧಿ ಪ್ರತಿಭಟನೆ ರದ್ದು

09:32 AM Oct 12, 2018 | |

ಬೆಂಗಳೂರು: ರಫೇಲ್‌ ಯುದ್ದ ವಿಮಾನ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಅ.13 ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್‌ ದಿಢೀರ್‌ ನಿರ್ಧಾರ ಬದಲಿಸಿದೆ. ಎಚ್‌ಎಎಲ್‌ ನಿವೃತ್ತ ಸಿಬ್ಬಂದಿ ಜೊತೆ ಅವರು ಸಂವಾದ ನಡೆಸಲಿದ್ದಾರೆ.

Advertisement

ನಗರದ ಹೊರ ವಲಯದ ಹೊರಮಾವು ಬಳಿಯ ಆಗರ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದರು. ಆದರೆ, ಆ ಪ್ರದೇಶ ಭದ್ರತಾ ದೃಷ್ಠಿಯಿಂದ ಅನುಕೂಲಕರವಾಗಿಲ್ಲ ಎಂದು ಎಸ್‌ಪಿಜಿ ಅನುಮತಿ ನಿರಾಕರಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಹುಲ್‌ ಗಾಂಧಿ ಬೇರೆ ಕಾರ್ಯಕ್ರಮಗಳು ಇರುವುದರಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಸಮಾವೇಶ ರದ್ದುಗೊಳಿಸಲಾಗಿದೆ. ಆದರೆ, ಎಚ್‌ಎಎಲ್‌ ನಿವೃತ್ತ ನೌಕರರ ಜೊತೆ ರಫೇಲ್‌ ಯುದ್ಧ ವಿಮಾನದ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.

ಎಚ್‌ಎಎಲ್‌ನಲ್ಲಿ ಸಂವಾದ ನಡೆಸಲು ಅವಕಾಶ ನಿರಾಕರಿಸಲಾಗಿದೆ ಎಂಬುದನ್ನು ಅಲ್ಲಗಳೆದ ದಿನೇಶ್‌ ಗುಂಡೂರಾವ್‌, ಎಚ್‌ಎಎಲ್‌ ಕ್ಯಾಂಪಸ್‌ನಲ್ಲಿ ಸಂವಾದ ನಡೆಸಲು ಅನುಮತಿ ನೀಡುವಂತೆ ಕೆಪಿಸಿಸಿ ಯಾವುದೇ ಪತ್ರ ಬರೆದಿಲ್ಲ. ಎಚ್‌ಎಎಲ್‌ನ ನಿವೃತ್ತ ಸಿಬ್ಬಂದಿ ಈ ಸಂವಾದ ಏರ್ಪಡಿಸಿದ್ದು, ಎಚ್‌ಎಎಲ್‌ನ ಸಾಮಾರ್ಥ್ಯದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ಬೇಸರಗೊಂಡಿರುವ ಕೆಲವು ಎಚ್‌ಎಎಲ್‌ ಸಿಬ್ಬಂದಿ ಈ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾರೆ.

ಎಚ್‌ಎಎಲ್‌ನ ಇತಿಹಾಸ, ದೇಶದ ರಕ್ಷಣಾ ಕ್ಷೇತ್ರಕ್ಕೆ ಎಚ್‌ಎಎಲ್‌ ಕೊಡುಗೆ ಏನು ಎನ್ನುವುದನ್ನು ದೇಶದ ಜನತೆಗೆ ಬಹಿರಂಗ ಪಡೆಸಲು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಆಹ್ವಾನಿಸಿದ್ದಾರೆ. ಅಕ್ಟೋಬರ್‌ 13 ರಂದು ರಾಹುಲ್‌ ಗಾಂಧಿ ಸಂವಾದ ಕಾರ್ಯಕ್ರಮ ಪಾಲ್ಗೊಂಡು ವಾಪಸ್‌ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಿದರು.

Advertisement

ಸರ್ಕಾರಿ ಕಂಪನಿಯ ಬಗ್ಗೆ ನಮ್ಮ ಸರ್ಕಾರದವರೇ ತೇಜೋವಧೆ ಮಾಡಿದರೆ, ಅಲ್ಲಿ ಕೆಲಸ ಮಾಡಿರುವ ನೌಕರರಿಗೆ ನೋವಾಗಿದೆ. ಯಾವುದೇ ಅನುಭವ ಇಲ್ಲದಿರುವ ರಿಲಾಯನ್ಸ್‌ ಕಂಪನಿಗೆ ಎಚ್‌ಎಎಲ್‌ನ ಹೊಲಿಕೆ ಮಾಡಿರುವುದರಿಂದ ಬೇಸರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next