ನವದೆಹಲಿ : ನಿರುದ್ಯೋಗ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಯುವಕರಿಗೆ ಉದ್ಯೋಗ ಇಲ್ಲದಂತಾಗಿದೆ ಎಂದು ಟೀಕಿಸಿರುವ ಅವರು, ‘ಈ ಸರ್ಕಾರದ ಅಭಿವೃದ್ಧಿ ಹೇಗಿದೆ ಎಂದರೆ ವಾರದ ರಜೆ ಮತ್ತು ಕೆಲಸದ ದಿನಗಳ ನಡುವಿನ ವ್ಯತ್ಯಾಸವೇ ಅಂತ್ಯವಾಗಿದೆ. ಉದ್ಯೋಗವೇ ಇಲ್ಲದಿದ್ದಾಗ ಭಾನುವಾರ ಮತ್ತು ಸೋಮವಾರ ಒಂದೇ ರೀತಿ ಇರುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ವಾಹನ ತಯಾರಿಕಾ ಕಂಪನಿ ಫೋರ್ಡ್ ಭಾರತದಲ್ಲಿ ವಾಹನ ತಯಾರಿಕೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಇದರಿಂದಾಗಿ 4,000 ಸಣ್ಣ ಸಂಸ್ಥೆಗಳು ಮುಚ್ಚಬಹುದು ಎಂಬುದಾಗಿ ಸಿಬ್ಬಂದಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಯೊಂದನ್ನು ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಬಿಜೆಪಿ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿಯಲ್ಲಿ ಭಾನುವಾರ ಮತ್ತು ಸೋಮವಾರದ ನಡುವಿನ ಎಲ್ಲಾ ವ್ಯತ್ಯಾಸಗಳು ಅಂತ್ಯವಾಗಿದೆ. ಉದ್ಯೋಗವೇ ಇಲ್ಲದಿದ್ದಾಗ ಭಾನುವಾರವಾದರೇನು, ಸೋಮವಾರವಾದರೇನು?’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್, ಕಳೆದ 70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಕಟ್ಟಿದ್ದ ಭಾರತವನ್ನು ಬಿಜೆಪಿ ಸರ್ಕಾರ ಕೇವಲ 7 ವರ್ಷಗಳಲ್ಲಿ ಮಾರಾಟ ಮಾಡಿದೆ ಎಂದು ಆರೋಪಿಸಿದ್ದರು.