Advertisement

ರಫೇಲ್‌: ಜೆಪಿಸಿಗೆ ನಕಾರ

12:30 AM Jan 03, 2019 | Team Udayavani |

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ಸಂಸತ್‌ನಲ್ಲಿ ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿರುವ ಮನವಿಯನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲ, ರಾಹುಲ್‌ ಪ್ರಸ್ತಾವಿಸಿದ ವಿಚಾರಗಳಿಗೆ ಕಟು ಮಾತಿನಲ್ಲಿ ಉತ್ತರವನ್ನೂ ನೀಡಿದ್ದಾರೆ. 

Advertisement

ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ರಾಹುಲ್‌ ಗಾಂಧಿಗೆ ಪ್ರತ್ಯುತ್ತರ ನೀಡಿದ ಜೇಟ್ಲಿ, ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ನೀಡಿರುವ ತೀರ್ಪು ಅಂತಿಮ. ಇದರ ಹೊರತಾಗಿಯೂ ಜೆಪಿಸಿ ರಚಿಸುವ ಅಗತ್ಯವಿಲ್ಲ ಎಂದಿದ್ದಾರೆ. ಜೇಟ್ಲಿ ಮಾತಿ  ನುದ್ದಕ್ಕೂ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ನಡೆಸಿದರು.

ಈ ಹಿಂದೆ ಬೋಫೋರ್ಸ್‌ ಒಪ್ಪಂದ ಕುರಿತಂತೆ ಕಾಂಗ್ರೆಸ್‌ ಸರಕಾರ ನಡೆಸಿದ್ದ ಜೆಪಿಸಿ ತನಿಖೆಯಲ್ಲಿ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಲಾಗಿತ್ತು. ಜೆಪಿಸಿ ತನಿಖೆಯು ಪಕ್ಷಪಾತ ರಹಿತವಾಗಿರುತ್ತದೆ ಎಂದು ಹೇಳಲಾಗದು. ಹೀಗಾಗಿ ಜೆಪಿಸಿ ತನಿಖೆಗೆ ರಫೇಲ್‌ ಒಪ್ಪಂದ ನೀಡುವುದಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಮೂಲ ವಿಮಾನದ ದರವನ್ನು ನಾವು ಬಹಿರಂಗಗೊಳಿಸಿದ್ದೇವೆ. ಆದರೆ ಶಸ್ತ್ರಸಜ್ಜಿತ ವಿಮಾನದ ದರವನ್ನು ಬಹಿರಂಗಗೊಳಿಸಿಲ್ಲ. ಇದರಿಂದ ಶತ್ರುದೇಶಗಳಿಗೆ ನಮ್ಮ ಬಳಿ ಯಾವ ಶಸ್ತ್ರಾಸ್ತ್ರಗಳು ಇವೆ ಎಂಬುದು ತಿಳಿಯುತ್ತದೆ. ಅಲ್ಲದೆ ಇದರಿಂದ ಒಪ್ಪಂದದ ಉಲ್ಲಂಘನೆಯೂ ಆಗುತ್ತದೆ.

ಮೂಲ ವಿಮಾನದ ದರವು ಈ ಹಿಂದೆ ಯುಪಿಎ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಶೇ.9ರಷ್ಟು ಕಡಿಮೆ ದರದ್ದಾಗಿದೆ. ಅಲ್ಲದೆ, ಶಸ್ತ್ರಸಜ್ಜಿತ ವಿಮಾನದ ದರ ಕೂಡ ಯುಪಿಎ ಮಾಡಿಕೊಂಡಿದ್ದ ದರಕ್ಕಿಂತ ಶೇ. 20ರಷ್ಟು ಕಡಿಮೆ ಇದೆ ಎಂದು ಜೇಟ್ಲಿ ಹೇಳಿದ್ದಾರೆ. ರಿಲಯನ್ಸ್‌ ಕಂಪೆನಿ ಇಡೀ ಒಪ್ಪಂದದ ಕೇವಲ ಶೇ.3ರಷ್ಟು ವಹಿವಾಟು ನಡೆಸುತ್ತದೆ. ಇಡೀ ಯುದ್ಧ ವಿಮಾನವನ್ನೇ ರಿಲಯನ್ಸ್‌ ತಯಾರಿಸುತ್ತಿದೆ ಎಂಬಂತೆ ರಾಹುಲ್‌ ಮಾತನಾಡುತ್ತಿದ್ದಾರೆ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ. ಅರುಣ್‌ ಜೇಟ್ಲಿ ಮಾತಿನ ಮಧ್ಯೆ ಕಾಂಗ್ರೆಸ್‌ ಸಂಸದರು ಕಾಗದದಿಂದ ವಿಮಾನಗಳನ್ನು ತಯಾರಿಸಿ ಎಸೆದಿದ್ದಾರೆ. ಇದನ್ನು ಗಮನಿಸಿದ ಸ್ಪೀಕರ್‌ , ನೀವೇನು ಮಕ್ಕಳೇ? ಶಾಲೆಯಲ್ಲಿದ್ದಾಗ ಕಾಗದದ ವಿಮಾನ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು.

ಪಾರೀಕರ್‌ ಟೇಪ್‌ ವಿವಾದ
ನನ್ನ ಬೆಡ್‌ರೂಮ್‌ನಲ್ಲಿ ರಫೇಲ್‌ ಕಡತಗಳು ಬಿದ್ದಿವೆ ಎಂದು ಗೋವಾ ಸಿಎಂ ಮನೋಹರ ಪಾರೀಕರ್‌ ಹೇಳಿದ್ದಾರೆನ್ನಲಾದ ಧ್ವನಿಯನ್ನು ಪ್ರಸಾರ ಮಾಡುವುದಾಗಿ ರಾಹುಲ್‌ ಸಂಸತ್‌ನಲ್ಲಿ ಹೇಳುತ್ತಿದ್ದಂತೆಯೇ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅಲ್ಲದೆ, ಸದನದಲ್ಲಿ ಕೋಲಾಹಲವೂ ಉಂಟಾಯಿತು. ಇದನ್ನು ಲಿಖೀತವಾಗಿ ದೃಢೀಕರಿಸಿದರೆ ಮಾತ್ರ ಪ್ರಸಾರ ಮಾಡಬಹುದು ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದರು. ಆದರೆ ದೃಢೀಕರಿಸಲು ಒಪ್ಪದ ರಾಹುಲ್‌ ಆಡಿಯೋ ಪ್ರಸಾರ ಮಾಡುವುದಿಲ್ಲ ಎಂದರು. ಈ ಮಧ್ಯೆ ಮಾತನಾಡಿದ ಜೇಟ್ಲಿ, ಇದು ಸತ್ಯವಾದದ್ದಲ್ಲ. ಹೀಗಾಗಿ ದೃಢೀಕರಿಸಲು ರಾಹುಲ್‌ ಹಿಂದೇಟು ಹಾಕುತ್ತಿದ್ದಾರೆ ಎಂದರು. ಇನ್ನೊಂದೆಡೆ ಈ ಆಡಿಯೋ ಕ್ಲಿಪ್‌ ನಕಲಿ ಎಂದು ಗೋವಾ ಸಚಿವ ವಿಶ್ವಜಿತ್‌ ರಾಣೆ ಆರೋಪಿಸಿದ್ದಾರೆ. ಇವೆಲ್ಲವೂ ಸುಳ್ಳಿನ ಕಥೆ ಎಂದು ಪಾರೀಕರ್‌ ಹೇಳಿದ್ದಾರೆ.

Advertisement

ನನ್ನ ಬಳಿ ರಫೇಲ್‌ನ ಎಲ್ಲ ದಾಖಲೆಗಳೂ ಇವೆ. ಹೀಗಾಗಿ ನನಗೆ ಯಾರೂ ತೊಂದರೆ ನೀಡಲಾಗದು ಎಂದು ಪಾರೀಕರ್‌ ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂಬುದಾಗಿ ರಾಣೆ ಮಾತನಾಡಿರುವುದು ಟೇಪ್‌ನಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next