Advertisement

ಒಟ್ಟಿಗೇ ಅಭ್ಯಾಸ ನಡೆಸಿದ ರಾಹುಲ್‌, ಶುಭಮನ್‌ ಗಿಲ್‌

12:16 AM Feb 28, 2023 | Team Udayavani |

ಇಂದೋರ್‌: ಆಸ್ಟ್ರೇಲಿಯ ಎದುರಿನ 3ನೇ ಟೆಸ್ಟ್‌ ಪಂದ್ಯಕ್ಕಾಗಿ ಟೀಮ್‌ ಇಂಡಿಯಾ ಆಟಗಾರು ಸೋಮವಾರ ಕಠಿನ ಅಭ್ಯಾಸ ನಡೆಸಿದರು. ವಿಶೇಷವೆಂದರೆ, ಆರಂಭಿಕರಾದ ಕೆ.ಎಲ್‌. ರಾಹುಲ್‌ ಮತ್ತು ಶುಭಮನ್‌ ಗಿಲ್‌ ಅವರಿಗೆ ಕೋಚ್‌ ರಾಹುಲ್‌ ದ್ರಾವಿಡ್‌ ಒಟ್ಟಿಗೇ ಕ್ಲಾಸ್‌ ತೆಗೆದುಕೊಂಡದ್ದು. ಇಬ್ಬರೂ ಸುಮಾರು ಅರ್ಧ ಗಂಟೆ ಕಾಲ ಒಟ್ಟೊಟ್ಟಿಗೇ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು.

Advertisement

ಈಗಾಗಲೇ ಕಳಪೆ ಫಾರ್ಮ್ನಿಂದಾಗಿ ಆಡುವ ಬಳಗದಲ್ಲಿ ಕೆ.ಎಲ್‌. ರಾಹುಲ್‌ ಸ್ಥಾನ ಅಲುಗಾಡುತ್ತಿದೆ. ಅವರನ್ನು ಉಪನಾಯಕತ್ವದಿಂದಲೂ ಕೆಳಗಿಳಿಸ ಲಾಗಿದೆ. 47 ಟೆಸ್ಟ್‌ಗಳಲ್ಲಿ 33.44ರ ಸಾಮಾನ್ಯ ಸರಾಸರಿಯನ್ನಷ್ಟೇ ಹೊಂದಿದ್ದಾರೆ. ಸರಣಿಯ ಮೊದಲೆರಡು ಟೆಸ್ಟ್‌ಗಳಲ್ಲಿ ಗಳಿಸಿದ್ದು 20, 17 ಮತ್ತು ಒಂದು ರನ್‌ ಮಾತ್ರ. ಇವರ ಸ್ಥಾನಕ್ಕೆ ಇನ್‌ಫಾರ್ಮ್ ಬ್ಯಾಟರ್‌ ಶುಭಮನ್‌ ಗಿಲ್‌ ಬರಬಹುದು ಎಂಬ ನಿರೀಕ್ಷೆ ದಟ್ಟವಾಗಿದೆ. ಹೀಗಾಗಿ ಇವರಿಬ್ಬರು ಒಟ್ಟಿಗೇ ಅಭ್ಯಾಸ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ರಾಹುಲ್‌ ಮತ್ತು ಗಿಲ್‌ ಅಕ್ಕಪಕ್ಕದ ನೆಟ್ಸ್‌ ನಲ್ಲಿ ಏಕಕಾಲಕ್ಕೆ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ರಾಹುಲ್‌ ಮೊದಲ 18 ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡಿದರು. ಬಳಿಕ ಸ್ಪಿನ್‌ ಎಸೆತಗಳಲ್ಲಿ ಏರಿಯಲ್‌ ಶಾಟ್‌ ಬಾರಿಸಿದರು. ಈ ಸಂದರ್ಭದಲ್ಲಿ ಅವರು ಆರ್‌. ಅಶ್ವಿ‌ನ್‌ ಎಸೆತಗಳನ್ನು ಎದುರಿಸಿದರು.

ರೋಹಿತ್‌, ಕೊಹ್ಲಿ…
ನಾಯಕ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಕೂಡ ಸುದೀರ್ಘ‌ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಇಬ್ಬರೂ ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿ ಹೊಡೆತ ಬಾರಿಸಿದರು.

ವಿರಾಟ್‌ ಕೊಹ್ಲಿ ಎಡಗೈ ಸ್ಪಿನ್ನರ್‌ಗಳ ಎಸೆತವನ್ನು ನೇರವಾಗಿ ಬೌಂಡರಿಗೆ ಬಡಿದಟ್ಟಿದರೆ, ರೋಹಿತ್‌ ಪುಲ್‌, ಸ್ವೀಪ್‌ ಮತ್ತು ರಿವರ್ಸ್‌ ಸ್ವೀಪ್‌ ಹೊಡೆತಗಳನ್ನು ಅಭ್ಯಸಿಸಿದರು.

Advertisement

ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ, ಕೆ.ಎಸ್‌. ಭರತ್‌ ರವಿವಾರವೇ ಹೋಳ್ಕರ್‌ ಅಂಗಳದಲ್ಲಿ ಅಭ್ಯಾಸ ಆರಂಭಿಸಿದ್ದರು. ಉಳಿದವರು ಸೋಮವಾರ ನೆಟ್‌ ಪ್ರಾಕ್ಟೀಸ್‌ಗೆ ಇಳಿದರು.

ಸ್ಟಾರ್ಕ್‌ ಬೌಲಿಂಗ್‌
ಕೈಬೆರಳಿನ ಗಾಯದಿಂದ ಮೊದಲೆರಡು ಟೆಸ್ಟ್‌ ಪಂದ್ಯಗಳಿಂದ ಹೊರಗುಳಿದಿದ್ದ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ಕೂಡ ಬೌಲಿಂಗ್‌ ಅಭ್ಯಾಸ ನಡೆಸಿದರು. ಆದರೆ ಅವರು ಪೂರ್ತಿ ಫಿಟ್‌ನೆಸ್‌ ಹೊಂದಿಲ್ಲ. ಆದರೂ ನಾಯಕ ಪ್ಯಾಟ್‌ ಕಮಿನ್ಸ್‌ ಜಾಗದಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗಿದೆ.

ಆಸ್ಟ್ರೇಲಿಯನ್ನರಿಗೆ ಸ್ಪಿನ್‌ ಚಿಂತೆ
ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಭಾರತದ ಸ್ಪಿನ್‌ ಎಸೆತಗಳನ್ನು ಎದುರಿಸಲಾಗದೆ ಸೋಲನುಭವಿಸಿದ್ದ ಆಸ್ಟ್ರೇಲಿಯಕ್ಕೆ ಇಂದೋರ್‌ನಲ್ಲೂ ಸ್ಪಿನ್‌ ಭೀತಿ ಎದುರಾಗಿದೆ. ಈ ಅಂಗಳದಲ್ಲಿ ಆರ್‌. ಅಶ್ವಿ‌ನ್‌ ಉತ್ತಮ ದಾಖಲೆ ಹೊಂದಿದ್ದಾರೆ. ಆಡಿದ 2 ಟೆಸ್ಟ್‌ಗಳಲ್ಲಿ 12.5 ಸರಾಸರಿಯೊಂದಿಗೆ 18 ವಿಕೆಟ್‌ ಉಡಾಯಿಸಿದ ಸಾಧನೆ ಅಶ್ವಿ‌ನ್‌ ಅವರದು.

ನಾಗ್ಪುರ ಮತ್ತು ಹೊಸದಿಲ್ಲಿ ಟೆಸ್ಟ್‌ಗಳಲ್ಲಿ ಸ್ಪಿನ್‌ ವಿರುದ್ಧ ಎರ್ರಾಬಿರ್ರಿ ಬ್ಯಾಟ್‌ ಬೀಸುವ ಮೂಲಕ ಆಸೀಸ್‌ ಪಡೆ ಮೂರೇ ದಿನಗಳಲ್ಲಿ ಶರಣಾಗಿತ್ತು. ಸ್ಪಿನ್‌ ಎಸೆತಗಳನ್ನು ನಿಭಾಯಿಸುವಲ್ಲಿ ಪರಿಪೂರ್ಣತೆ ಸಾಧಿಸದ ಹೊರತು ಆಸೀಸ್‌ಗೆ ಈ ಸರಣಿಯಲ್ಲಿ ಉಳಿಗಾಲವಿಲ್ಲ ಎಂಬುದೊಂದು ಸಾಮಾನ್ಯ ಲೆಕ್ಕಾಚಾರ.

ಸೋಮವಾರ ಉಸ್ಮಾನ್‌ ಖ್ವಾಜಾ ಮತ್ತು ಸ್ಟೀವನ್‌ ಸ್ಮಿತ್‌ ಸುಮಾರು ಒಂದು ಗಂಟೆ ಕಾಲ ನಥನ್‌ ಲಿಯಾನ್‌ ಮತ್ತು ಮ್ಯಾಥ್ಯೂ ಕನೇಮನ್‌ ಅವರ ಸ್ಪಿನ್‌ ಎಸೆತಗಳನ್ನು ನಿಭಾಯಿಸಿದರು. ಇವರಲ್ಲಿ ಲಿಯಾನ್‌ ಎಸೆತಗಳು ಇಬ್ಬರಿಗೂ ಸಾಕಷ್ಟು ಉಪಟಳ ನೀಡಿದವು. ಆದರೆ ಕನೇಮನ್‌ ಎಸೆತಗಳಲ್ಲಿ ದೊಡ್ಡ ಹೊಡೆತ ಬಾರಿಸಿದರು.

ಮಾರ್ನಸ್‌ ಲಬುಶೇನ್‌, ಅಲೆಕ್ಸ್‌ ಕ್ಯಾರಿ ಮತ್ತು ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಅವರು ಸ್ಪಿನ್ನರ್‌ಗಳಾದ ಟಾಡ್‌ ಮರ್ಫಿ ಹಾಗೂ ಮಿಚೆಲ್‌ ಸ್ವೆಪ್ಸನ್‌ ಎಸೆತಗಳನ್ನು ಎದುರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next