Advertisement

ಗಿಣಿ ಪಾಠ; ದಶಕದ ಪಯಣ-25ನೇ ಹೆಜ್ಜೆ

11:22 AM Oct 05, 2019 | mahesh |

ಎಲ್ಲಾ ಕಲಾವಿದರಂತೆ ನನ್ನ ಸಿನಿಪಯಣದಲ್ಲೂ ಸಾಕಷ್ಟು ಏರಿಳಿತಗಳಾಗಿವೆ. ಹಾಗಂತ ನಾನು ಬೇಸರಪಟ್ಟುಕೊಳ್ಳಲಿಲ್ಲ. ಏಕೆಂದರೆ ಸಮಯ ಯಾವತ್ತೂ ಒಂದೇ ರೀತಿ ಇರೋದಿಲ್ಲ…

Advertisement

ನಟಿಮಣಿಯರಿಗೆ ಚಿತ್ರರಂಗದಲ್ಲಿ ಆಯಸ್ಸು ಕಡಿಮೆ ಎಂಬ ಮಾತಿದೆ. ಐದಾರು ವರ್ಷ ನಾಯಕಿಯಾಗಿ ಮಿಂಚಿದ ನಂತರ ಅವರು ಚಿತ್ರರಂಗದಿಂದ ದೂರವಾಗುತ್ತಾರೆ ಅಥವಾ ಅವಕಾಶದ ಕೊರತೆ ಕಾಡುತ್ತದೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಲೇ ಇರುತ್ತದೆ. ಆದರೆ, ಒಂದಷ್ಟು ನಟಿಯರು ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳನ್ನು ದಾಟಿ ಮುನ್ನುಗ್ಗುತ್ತಿದ್ದಾರೆ. ಆ ಸಾಲಿಗೆ ಸೇರುವ ನಟಿಯರಲ್ಲಿ ರಾಗಿಣಿ ಕೂಡಾ ಸಿಗುತ್ತಾರೆ. ರಾಗಿಣಿ ಚಿತ್ರರಂಗಕ್ಕೆ ಬಂದು10 ವರ್ಷ ಆಗಿದೆ. “ಹೋಳಿ’ ಚಿತ್ರದ ಮೂಲಕ ಬಣ್ಣ ಹಚ್ಚಿದರೂ ಮೊದಲು ಬಿಡುಗಡೆಯಾಗಿದ್ದು, “ವೀರ ಮದಕರಿ’ ಚಿತ್ರ. ಈ ಹತ್ತು ವರ್ಷಗಳಲ್ಲಿ ರಾಗಿಣಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದಾರೆ. ಈಗ ರಾಗಿಣಿ ಮತ್ತೂಂದು ಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದು “ಅಧ್ಯಕ್ಷ ಇನ್‌ ಅಮೆರಿಕ’ ಚಿತ್ರದ ಮೂಲಕ. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿದ್ದು, ಎನ್‌ಆರ್‌ಐ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಇದು ರಾಗಿಣಿ ನಾಯಕಿಯಾಗಿರುವ 25 ನೇ ಸಿನಿಮಾ. ರಾಗಿಣಿಯ ಈ ಹತ್ತು ವರ್ಷಗಳ ಕೆರಿಯರ್‌ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಇವುಗಳನ್ನು ಹೊರತು ಪಡಿಸಿದರೆ “ಅಧ್ಯಕ್ಷ ಇನ್‌ ಅಮೆರಿಕ’ 25ನೇ ಸಿನಿಮಾ. ಈ ಸಿನಿಮಾ ಬಗ್ಗೆ ಮಾತನಾಡುವ ರಾಗಿಣಿ, “ಚಿತ್ರದಲ್ಲಿ ನನಗೆ ಹೊಸ ಬಗೆಯ ಪಾತ್ರ ಸಿಕ್ಕಿದೆ. ಪಕ್ಕಾ ಗ್ಲಾಮರಸ್‌ ಆಗಿರುವ ಪಾತ್ರ ಸಿಕ್ಕಿದೆ. ಶರಣ್‌ ಜೊತೆ ನಟಿಸಿರೋದು ಒಳ್ಳೆಯ ಅನುಭವ’ ಎನ್ನುತ್ತಾರೆ.

ಇನ್ನು, ತಮ್ಮ ಹತ್ತು ವರ್ಷದ ಜರ್ನಿಯ ಬಗ್ಗೆ ಮಾತನಾಡುವ ರಾಗಿಣಿ, “ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾದರೂ ಎಲ್ಲವೂ ಹೊಸತೆನಿಸುತ್ತಿದೆ. ನಿನ್ನೆ-ಮೊನ್ನೆ ಚಿತ್ರರಂಗಕ್ಕೆ ಬಂದಂತೆ ಫೀಲ್‌ ಆಗುತ್ತಿದೆ. ಈ ಹತ್ತು ವರ್ಷದ ಜರ್ನಿಯಲ್ಲಿ ಸಿಹಿ-ಕಹಿ ಎರಡೂ ಇದೆ. ಆದರೆ, ನಾನು ಕಹಿಗಿಂತ ಹೆಚ್ಚಾಗಿ ಸಿಹಿಯನ್ನೇ ನೆನಪಲ್ಲಿಟ್ಟುಕೊಂಡಿದ್ದೇನೆ. ಏಕೆಂದರೆ ಕಹಿ ಅನುಭವಗಳು ನಮ್ಮನ್ನು ಕುಗ್ಗಿಸುತ್ತವೆ, ಅದೇ ಸಿಹಿ ಅನುಭವಗಳು ಇನ್ನಷ್ಟು ಒಳ್ಳೆಯ ಕೆಲಸಗಳಿಗೆ ಪ್ರೇರೇಪಿಸುತ್ತವೆ’ ಎನ್ನುವುದು ರಾಗಿಣಿ ಮಾತು.

ತಮ್ಮ ಪಾತ್ರಗಳ ಆಯ್ಕೆಯ ಬಗ್ಗೆಯೂ ರಾಗಿಣಿ ಮಾತನಾಡುತ್ತಾರೆ. “ನಾನು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಿಂದ ಹಿಡಿದು ಹೀರೋಯಿನ್‌ ಓರಿಯೆಂಟೆಡ್‌ ಸಿನಿಮಾಗಳಲ್ಲೂ ಮಾಡಿದ್ದೇನೆ. ಒಳ್ಳೆಯ ಅನುಭವ, ಕೆಟ್ಟ ಅನುಭವ ಎರಡೂ ಆಗಿದೆ. ಎಲ್ಲಾ ಕಲಾವಿದರಂತೆ ನನ್ನ ಸಿನಿಪಯಣದಲ್ಲೂ ಸಾಕಷ್ಟು ಏರಿಳಿತಗಳಾಗಿವೆ. ಹಾಗಂತ ನಾನು ಬೇಸರಪಟ್ಟುಕೊಳ್ಳಲಿಲ್ಲ. ಏಕೆಂದರೆ ಸಮಯ ಯಾವತ್ತೂ ಒಂದೇ ರೀತಿ ಇರೋದಿಲ್ಲ. ಅದನ್ನು ನಂಬಿಕೊಂಡು ಜರ್ನಿ ಮುಂದುವರೆಸಿದವಳು ನಾನು. ಒಂದು ಹಂತದಲ್ಲಿ ನಾನು ದಪ್ಪಗಾದ ಬಗ್ಗೆ ಅನೇಕರು ಟೀಕೆ ಮಾಡಿದರು, ಇನ್ನು ಇವಳ ಕೆರಿಯರ್‌ ಇಷ್ಟೇ ಎಂದು ಮಾತನಾಡಿಕೊಂಡರು. ಆಗ ನಾನು ಏನೂ ಮಾತನಾಡದೇ ಸ್ಲಿಮ್‌ ಆಗುವ ಮೂಲಕ ಉತ್ತರ ಕೊಟ್ಟೆ. ಚಿತ್ರರಂಗದಲ್ಲಿ ಅನುಭವ ಆಗುತ್ತಿದ್ದಂತೆ ನಮ್ಮ ಆದ್ಯತೆಗಳು ಕೂಡಾ ಬದಲಾಗುತ್ತಾ ಹೋಗುತ್ತದೆ.ಅದಕ್ಕೆ ತಕ್ಕಂತಹ ಪಾತ್ರಗಳನ್ನು ಈಗ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುವುದು ರಾಗಿಣಿ ಮಾತು.

ರಾಗಿಣಿ ನಾಯಕಿಯಾಗಿ ಕೇವಲ ಹೀರೋಗಳ ಜೊತೆ ಮರಸುತ್ತಲಿಲ್ಲ. ಸೋಲೋ ಹೀರೋಯಿನ್‌ ಆಗಿಯೂ ಮಿಂಚಿದ್ದಾರೆ. ರಾಗಿಣಿ ಐಪಿಎಸ್‌’ ಮೂಲಕ ಆರಂಭವಾದ ಆಕೆಯ ಸೋಲೋ ಸಿನಿಮಾದ ಜರ್ನಿ ಇನ್ನೂ ಮುಂದುವರೆಯುತ್ತಲೇ ಇದೆ.

Advertisement

ಒಂದೆರಡು ಸಿನಿಮಾ ಹಿಟ್‌ಲಿಸ್ಟ್‌ ಸೇರಿದರೆ, ಮಿಕ್ಕವೂ ಸದ್ದು ಮಾಡಲಿಲ್ಲ. ರಾಗಿಣಿ ಕೆರಿಯರ್‌ಗೆ ನಾಯಕಿ ಪ್ರಧಾನ ಚಿತ್ರಗಳು ಮುಳುವಾಯಿತೇ ಎಂದರೆ ಖಂಡಿತಾ ಇಲ್ಲ ಎಂಬ ಉತ್ತರ ರಾಗಿಣಿಯಿಂದ ಬರುತ್ತದೆ. “ನಾನು ನಾಯಕಿ ಪ್ರಧಾನವಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಸೂಪರ್‌ ಹಿಟ್‌ ಆಯಿತು. ಎರಡನೇ ಸಿನಿಮಾ ಆ್ಯವರೇಜ್‌ ಆಯಿತು. ಉಳಿದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗದೇ ಹೋದರೂ ನಿರ್ಮಾಪಕರಿಗೆ ಹಾಕಿದ ಬಂಡವಾಳವನ್ನು ವಾಪಾಸ್‌ ತಂದುಕೊಡುವಲ್ಲಿ ಹಿಂದೆ ಬೀಳಲಿಲ್ಲ’ ಎನ್ನುತ್ತಾರೆ.

10 ವರ್ಷ ಹತ್ತು ಟಿಪ್ಸ್‌
1 ನೀವು ಯಾವಾಗಲೂ ನೀವಾಗಿಯೇ ಇರಲು ಪ್ರಯತ್ನಿಸಿ.
2 ಯಾರನ್ನೂ ಅನುಕರಿಸಲು, ಅನುಸರಿಸಲು ಹೋಗಬೇಡಿ.
3 ನೀವು ನಡೆಯುವ ಹಾದಿಯ ಮೇಲೆ ನಿಮಗೆ ಸದಾ ನಂಬಿಕೆ ಇರಲಿ.
4 ಬೇರೆಯವರು ನಿಮ್ಮನ್ನ ಪ್ರೀತಿಸುವ ಮೊದಲು, ನಿಮ್ಮನ್ನು ನೀವು ಮೊದಲು ಪ್ರೀತಿಸಿ.
5 ನಿಮ್ಮ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಿ.
6 ಸದಾ ಹೊಸದನ್ನು ಏನಾದರೂ ಕಲಿಯುತ್ತಿರಿ. ಕಲಿಕೆ ಅನ್ನೋದು ನಿಲ್ಲದಿರಲಿ.
7 ಮೇಲಿರಲಿ, ಕೆಳಗಿರಲಿ, ಪ್ರತಿಯೊಬ್ಬರನ್ನೂ ಗೌರವದಿಂದ ನೋಡಿರಿ.
8 ಯಾವುದೇ ಅಹಂಕಾರ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಡಿ.
9 ಯಶಸ್ಸಿನ ಅಮಲನ್ನು ಯಾವುದೇ ಕಾರಣಕ್ಕೂ ತಲೆಗೇರಿಸಿಕೊಳ್ಳಬೇಡಿ.
10 ನಿಮ್ಮ ಗುರಿಯನ್ನ ಇನ್ನೊಬ್ಬರು ಕಸಿದುಕೊಳ್ಳಲು ಬಿಡಬೇಡಿ. ಸಾಧಿಸುವವರೆಗೂ ಹೋರಾಡುತ್ತಲೇ ಇರಿ.

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next