“ದುನಿಯಾ’ ವಿಜಯ್ ತಮ್ಮ ಮಗ ಸಾಮ್ರಾಟ್‌ನನ್ನು “ಕುಸ್ತಿ’ ಸಿನಿಮಾ ಮೂಲಕ ಲಾಂಚ್ ಮಾಡಲು ಹೊರಟಿರೋದು, ಈಗಾಗಲೇ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆಂಬ ಕುತೂಹಲ ಅನೇಕರಿಗಿತ್ತು. ಈ ನಡುವೆಯೇ ಅನಿಲ್ ಎನ್ನುವವರು “ಕುಸ್ತಿ’ ಸಿನಿಮಾ ಮಾಡುತ್ತಾರೆಂಬ ಸುದ್ದಿಯೂ ಕೇಳಿಬಂದಿತ್ತು. ಆದರೆ ಈಗ ಆಂತಿಮವಾಗಿ “ಕುಸ್ತಿ’ಗೆ ನಿರ್ದೇಶಕರು ಸಿಕ್ಕಿದ್ದಾರೆ.
ಅದು ರಾಘು ಶಿವಮೊಗ್ಗ. ಈ ಹೆಸರನ್ನು ಎಲ್ಲೋ ಕೇಳಿದಂತಿದೆಯಲ್ಲ ಎಂದುಕೊಳ್ಳಬಹುದು. “ಚೂರಿಕಟ್ಟೆ’ ಎಂಬ ಬಗ್ಗೆ ನಿಮಗೆ ಗೊತ್ತಿದ್ದರೆ ರಾಘು ಶಿವಮೊಗ್ಗ ಅವರ ಬಗ್ಗೆಯೂ ಗೊತ್ತಿರುತ್ತದೆ. “ಚೂರಿಕಟ್ಟೆ’ ಸಿನಿಮಾವನ್ನು ನಿರ್ದೇಶಿಸಿದ್ದು ಇದೇ ರಾಘು ಶಿವಮೊಗ್ಗ. ಅದಕ್ಕಿಂತ ಮುನ್ನ ರಾಘು ಶಿವಮೊಗ್ಗ “ಚೌಕಭಾರ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು ಮತ್ತು ಅದಕ್ಕೆ ಪ್ರಶಸ್ತಿಯೂ ಬಂದಿತ್ತು.
“ಚೂರಿಕಟ್ಟೆ’ ನಂತರ ಹೊಸ ಸಿನಿಮಾಕ್ಕೆದ ಸ್ಕ್ರಿಪ್ಟ್ ಮಾಡುವಲ್ಲಿ ಬಿಝಿಯಾಗಿದ್ದ ರಾಘು ಅವರಿಗೆ ವಿಜಯ್ “ಕುಸ್ತಿ’ಯ ಆಫರ್ ಕೊಟ್ಟಿದ್ದಾರೆ. 15 ದಿನಗಳ ಹಿಂದೆ ರಾಘು “ಕುಸ್ತಿ’ ತಂಡ ಸೇರಿಕೊಂಡು, ಸಿನಿಮಾದ ಪೂರ್ವಸಿದ್ಧತೆಯಲ್ಲಿ ಬಿಝಿಯಾಗಿದ್ದಾರೆ. ಎಲ್ಲಾ ಓಕೆ, ರಾಘು ಅವರಿಗೆ ಈ ಆಫರ್ ಹೇಗೆ ಸಿಕ್ಕಿತು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ “ಚೂರಿಕಟ್ಟೆ’. “ಚೂರಿಕಟ್ಟೆ’ ಸಿನಿಮಾ ನೋಡಿದ ವಿಜಯ್ ಅವರಿಗೆ ಆ ಸಿನಿಮಾ ತುಂಬಾ ಇಷ್ಟವಾಯಿತಂತೆ.
ನಂತರ ಕರೆದು, ತಮ್ಮ ಸಿನಿಮಾದಲ್ಲಿ ಕೆಲಸ ಮಾಡುವ ಆಫರ್ ನೀಡಿದ್ದಾರೆ. ರಾಘು ಕೂಡಾ ಈ ಅವಕಾಶವನ್ನು ಖುಷಿಯಿಂದಲೇ ಒಪ್ಪಿಕೊಂಡು, ಸಿನಿಮಾದ ಸಿದ್ಧತೆಯಲ್ಲಿ ಬಿಝಿಯಾಗಿದ್ದಾರೆ. ಇದೇ 17ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಅಂದು ವಿಜಯ್ ಪುತ್ರ ಸಾಮ್ರಾಟ್ ಅವರ ಹುಟ್ಟುಹಬ್ಬವಾಗಿದ್ದು, ಚಿತ್ರದ ಟೀಸರ್ ಮೂಲಕ ಸಿನಿಮಾದ ಝಲಕ್ ತೋರಿಸಲಿದ್ದಾರೆ. “ಇದು ನನಗೆ ಸಿಕ್ಕ ಒಳ್ಳೆಯ ಅವಕಾಶ.
ಒಬ್ಬ ಸ್ಟಾರ್ ನಟ ಕರೆದು ನಮ್ಮಂತಹ ಹೊಸ ನಿರ್ದೇಶಕರಿಗೆ ಅವಕಾಶ ಕೊಡುತ್ತಾರೆಂದರೆ ಅದಕ್ಕಿಂತ ಖುಷಿ ಇನ್ನೇನಿದೆ. ವಿಜಯ್ ಅವರ ಸಿನಿಮಾ ಪ್ರೀತಿ, ಶ್ರದ್ಧೆಯನ್ನು ಮೆಚ್ಚಲೇಬೇಕು’ ಎನ್ನುತ್ತಾರೆ ರಾಘು. ಇತ್ತ ಕಡೆ ವಿಜಯ್ ಪುತ್ರ ಸಾಮ್ರಾಟ್ ಕೂಡಾ “ಕುಸ್ತಿ’ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಕುಸ್ತಿ’ಗಾಗಿ ಅಪ್ಪ-ಮಗ ಇಬ್ಬರೂ ತೊಡೆ ತಟ್ಟಿ ಸೆಡ್ಡು ಹೊಡೆಯೋ ಮೂಲಕ ಸಜ್ಜಾಗಿದ್ದಾರೆ.
ದಿನವೊಂದಕ್ಕೆ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ. ವಿಜಯ್ ದಿನವೊಂದಕ್ಕೆ ಐದು ತಾಸು ವಕೌìಟ್ ಮಾಡಿದರೆ, ಅವರ ಪುತ್ರ ಸಾಮ್ರಾಟ್ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು ತಾಸು ವಕೌìಟ್ ಮಾಡುತ್ತಿದ್ದಾನೆ. “ಕುಸ್ತಿ’ಗೋಸ್ಕರ ಪಕ್ಕಾ ಪೈಲ್ವಾನ್‌ಗಳಂತೆ ರೆಡಿಯಾಗಬೇಕೆಂಬುದು ವಿಜಯ್ ಆಸೆ. ಅದಕ್ಕಾಗಿಯೇ, ಯಾವ ಚಿತ್ರವನ್ನೂ ಒಪ್ಪಿಕೊಳ್ಳದೆ, ಬರೀ “ಕುಸ್ತಿ’ಗಾಗಿಯೇ ಬೆಳಗ್ಗೆ, ಸಂಜೆ ತಯಾರಿ ನಡೆಸುತ್ತಿದ್ದಾರೆ.
ಸಾಮ್ರಾಟ್‌ಗೆ ಈಗಾಗಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಡುತ್ತಿದ್ದಾರಂತೆ. ವಿಜಯ್ ಅವರೂ ಕೂಡ “ಕುಸ್ತಿ’ಯ ಪಟ್ಟುಗಳನ್ನು ಹೇಗೆಲ್ಲಾ ಹಿಡಿಯಬೇಕೆಂಬ ಬಗ್ಗೆಯೂ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರಂತೆ. ಒಟ್ಟು ಮೂವರು ಪ್ರಸಿದ್ಧ ಕುಸ್ತಿ ಪಟುಗಳಿಂದ ಅಪ್ಪ-ಮಗ ತರಬೇತಿ ಪಡೆಯುತ್ತಿದ್ದಾರೆ. ಇನ್ನು, ಚಿತ್ರದ ಇತರ ತಾರಾಗಣ, ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ.