ಮೈಸೂರು: ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ಪ್ರಶಸ್ತಿಗಳು ಹುಡುಕಿ ಬರುತ್ತವೆ ಎಂದು ಪುನೀತ್ ಯಾವಾಗಲೂ ಹೇಳುತ್ತಿದ್ದ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ನನ್ನ ತಮ್ಮನಿಂದ ನಾನು ಸ್ವರ್ಗ ನೋಡುತ್ತಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದರು.
ಮೈಸೂರು ವಿವಿ ಘಟಿಕೋತ್ಸವದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಪುನೀತ್ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು.
ಇದನ್ನೂ ಓದಿ:ಮೈಸೂರು ವಿವಿ: ಪುನೀತ್ ರಾಜಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಅಶ್ವಿನಿ ಪುನೀತ್ ರಾಜ್‍ಕುಮಾರ್ ಪರವಾಗಿ ಮಾತನಾಡಿದ ಅವರು, ಜೀವನ ಒಂದು ಚಕ್ರ ಇದ್ದಂತೆ. ನಮ್ಮ ತಂದೆಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ದರು. ಇಂದು ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದೆ. ನನಗೆ ಇದು ವೇದಿಕೆ ರೀತಿ ಕಾಣಿಸುತ್ತಿಲ್ಲ, ಸರಸ್ವತಿ ಮಂದಿರ ತರಹ ಕಾಣುತ್ತಿದೆ. ಈ ಗೌರವ ಡಾಕ್ಟರೇಟ್ ನಮ್ಮ ಕುಟುಂಬದ ಜವಾಬ್ದಾರಿಯನ್ನ ಹೆಚ್ಚಿಸಿದೆ. ಅಶ್ವಿನಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಮಾಜಿಕ ಸೇವೆ ಮುಂದುವರೆಸುತ್ತೇವೆ ಎಂದರು.
ಚಿನ್ನದ ಪದಕ ಘೋಷಣೆ: ಇದೇ ಸಂದರ್ಭದಲ್ಲಿ ಡಾ. ರಾಜ್ ಕುಟುಂಬದಿಂದ ಎರಡು ಚಿನ್ನದ ಪದಕ ಘೋಷಣೆ ಮಾಡಲಾಯಿತು. ಅಶ್ವಿನಿ ಪುನೀತ್ ರಾಜ್ ಕುಮಾರ್‌ರಿಂದ ಎರಡು ಬಂಗಾರದ ಪದಕ ಘೋಷಣೆ ಮಾಡಿದರು.ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಬಿಸಿನೆಸ್ ಮ್ಯಾನೆಜ್‌ಮೆಂಟ್ ಗೆ ಒಂದು ಚಿನ್ನದ ಪದಕ, ಡಾ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಲಲಿತಾಕಲಾ ವಿಭಾಗಕ್ಕೆ ಒಂದು ಚಿನ್ನದ ಪದಕ ಸ್ಥಾಪಿಸುವುದಾಗಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಘೋಷಿಸಿದರು.