ಏನೇನೋ ಮಾಡಿದರಂತೆ ರವೀಂದ್ರ ಗೋಪಾಲ್. ರಾಯರ ಗುಡಿ ಕಟ್ಟಿಸಿದರಂತೆ, ಧಾನ-ಧರ್ಮ ಮಾಡಿದರಂತೆ … ಆದರೂ ಏನೋ ಸಮಾಧಾನವಿರಲಿಲ್ಲವಂತೆ. ಕೊನೆಗೆ ರಾಯರ ಕುರಿತ ಒಂದು ಚಿತ್ರ ಮಾಡಿದರೆ, ರಾಯರ ಮಹಿಮೆಯನ್ನು ಹೆಚ್ಚು ಜನರಿಗೆ ತಲುಪಿಸಬಹುದು ಮತ್ತು ರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು 2012ರಲ್ಲಿ “ರಾಘವೇಂದ್ರ ಮಹಿಮೆ – ಮಂತ್ರಾಲಯ’ ಎಂಬ ಚಿತ್ರ ಮಾಡಿದ್ದರು. ಹೀಗೆ ಶುರುವಾದ ಚಿತ್ರ, ನಾನಾ ಕಾರಣಗಳಿಂದ ತಡವಾಗಿ, ಈಗ ಬಿಡುಗಡೆಗೆ ನಿಂತಿದೆ. ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳನ್ನು ಬಿಡುಗಡೆ ಮಾಡೋಣ ಎಂದು ರವೀಂದ್ರ ಗೋಪಾಲ್ ಮತ್ತೂಮ್ಮೆ ಪ್ರತ್ಯಕ್ಷರಾದರು.
ಪ್ರಮೋದ್ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ವಿಜಯ್ ರಾಘವೇಂದ್ರ ಬಂದಿದ್ದರು. ಜೊತೆಗೆ ನಾಯಕಿ ಅಶ್ವಿನಿ ಗೌಡ, ಗಾಯಕ ಅಜಯ್ ವಾರಿಯರ್, ನಿರ್ದೇಶಕ ಕೃಷ್ಣ ಚಂದ್ರ ಮುಂತಾದವರು ಇದ್ದರು. ಎಲ್ಲರ ಸಮ್ಮುಖದಲ್ಲಿ ಹಾಡುಗಳು ಬಿಡುಗಡೆಯಾದವು. ಅದಕ್ಕೂ ಮುನ್ನ ಮಾತಾಯಿತು.
ನೀವು ರಾಘವೇಂದ್ರ, ಚಿತ್ರವೂ ರಾಘವೇಂದ್ರರ ಬಗ್ಗೆ ಎಂದು ಆಹ್ವಾನ ನೀಡಲಾಯಿತಂತೆ. ಇದು ಕೇಳಿ ಖುಷಿಯಾದ ವಿಜಯ್ ರಾಘವೇಂದ್ರ ಸಭಾರಂಭಕ್ಕೆ ಬಂದಿದ್ದರು. “ಈ ಹಿಂದೆ ಡಾ. ರಾಜಕುಮಾರ್, ರಜನಿಕಾಂತ್ ಮುಂತಾದವರು ರಾಘವೇಂದ್ರರ ಪಾತ್ರಗಳನ್ನು ಮಾಡಿದ್ದರು. ನನಗೂ ರಾಯರ ಪಾತ್ರ ಮಾಡುವ ಆಸೆ ಇದೆ. ಅದೇ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಬರುತ್ತೀನಿ ಎಂದೆ. ಇತ್ತೀಚಿನ ದಿನಗಳಲ್ಲಿ ಭಕ್ತಿ ಪ್ರಧಾನ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿರುವಾಗ, ಬಹಳ ಕಷ್ಟದಲ್ಲಿ ಈ ಸಿನಿಮಾ ಮಾಡುತ್ತಿದ್ದಾರೆ. ಒಳ್ಳೆಯದಾಗಲಿ’ ಎಂದರು. ಸಾಯಿಪ್ರಕಾಶ್‌ಗೆ ನಿರ್ದೇಶಕ ಕೃಷ್ಣಚಂದ್ರ ಅವರ ಪರಿಚಯ ಹಳೆಯದ್ದು. ಇಬ್ಬರೂ ಚಂದ್ರಶೇಖರ್ ರೆಡ್ಡಿ ಎಂಬ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದರಂತೆ. “ಈ ಚಿತ್ರವನ್ನು ಭಕ್ತರೊಬ್ಬರು ಮೆಚ್ಚಿದ ದೇವರಿಗೆ ಕಾಣಿಕೆಯಾಗಿ ಕೊಡುತ್ತಿದ್ದಾರೆ. ರಾಯರು ಆಶೀರ್ವಾದ ಮಾಡಲಿ’ ಎಂದರು.
ರವೀಂದ್ರ ಗೋಪಾಲ್ ಈ ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ ಅಲ್ಲ, ಚಿತ್ರದಲ್ಲಿ ರಾಯರಾಗಿ ಕಾಣಿಸಿಕೊಂಡಿದ್ದಾರೆ.
ಇದುವರೆಗೂ ರಾಯರ ಕುರಿತ ಕೇಳದ ಹಲವು ಘಟನೆಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿರುವುದಾಗಿ ರವೀಂದ್ರ ಗೋಪಾಲ್ ಹೇಳಿಕೊಂಡರು. ಇನ್ನು ದೇವರ ಚಿತ್ರವೊಂದರಲ್ಲಿ ನಟಿಸಬೇಕು ಎನ್ನುವುದು ತಮ್ಮ ಹಲವು ದಿನಗಳ ಆಸೆಯಾಗಿತ್ತಂತೆ ಅಶ್ವಿನಿಗೆ. ಅದು ಈ ಚಿತ್ರದಲ್ಲಿ ಈಡೇರುವುದರ ಜೊತೆಗೆ ರಾಯರ ಕೃಪೆಯಿಂದ ಬಿಝಿಯಾಗಿದ್ದಾಗಿ ಅವರು ಹೇಳಿದರು. ಇನ್ನು ಸಂಗೀತ ನಿರ್ದೇಶಕ ಪ್ರಮೋದ್ ಅವರು ಚಿತ್ರಕ್ಕೆ ಏಳು ಹಾಡುಗಳನ್ನು ಮತ್ತು ಐದು ಶ್ಲೋಕಗಳಿಗೆ ಸಂಗೀತ ಸಂಯೋಜಿಸಿದ್ದಾರಂತೆ.