ಮಾರ್ಚ್ 8ರ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಘವೇಂದ್ರ ರಾಜಕುಮಾರ್ ಅಭಿನಯದ “ಅಮ್ಮನ ಮನೆ’ ಚಿತ್ರ ತೆರೆಗೆ ಬಂದಿದೆ. ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು ಹದಿನಾಲ್ಕು ವರ್ಷಗಳ ನಂತರ ತೆರೆಮೇಲೆ ರಾಘವೇಂದ್ರ ರಾಜಕುಮಾರ್ ಅವರನ್ನು ಕಂಡ ಸಿನಿ ಪ್ರಿಯರು ಚಿತ್ರದಲ್ಲಿ ಅವರ ಪಾತ್ರ ಮತ್ತು ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇನ್ನು ರಾಘಣ್ಣ ಕೂಡ “ಅಮ್ಮನ ಮನೆ’ ಚಿತ್ರದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಪ್ರೇಕ್ಷಕರಿಂದ ಬರುತ್ತಿರುವ ಮೆಚ್ಚುಗೆಯ ಅಭಿಪ್ರಾಯವನ್ನು ಕೇಳಿ ಖುಷಿಯಾಗಿದ್ದಾರೆ.
ರಾಘಣ್ಣ ಅವರ ಇದೇ ಖುಷಿಯನ್ನು ಡಬಲ್ ಮಾಡುವಂತೆ, ಇದೇ ತಿಂಗಳ ಕೊನೆಗೆ ಅವರ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಹೌದು, ರಾಘವೇಂದ್ರ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ತ್ರಯಂಬಕಂ’ ಚಿತ್ರ ಕೂಡ ಇದೇ ಮಾರ್ಚ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. “ತ್ರಯಂಬಕಂ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ, ರೋಹಿತ್, ಅನುಪಮ ಗೌಡ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕಳೆದ ವರ್ಷ “ಆ ಕರಾಳ ರಾತ್ರಿ’, “ಪುಟ 109′ ಚಿತ್ರಗಳನ್ನು ನಿರ್ದೇಶಿಸಿದ್ದ ದಯಾಳ್ ಪದ್ಮನಾಭನ್ “ತ್ರಯಂಬಕಂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ “ತ್ರಯಂಬಕಂ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ, ಚಿತ್ರಕ್ಕೆ “ಯು’ ಪ್ರಮಾಣಪತ್ರವನ್ನು ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಸದ್ಯ ಬಿಡುವಿಲ್ಲದೆ ಚಿತ್ರದ ಪ್ರಮೋಷನ್ ಕಾರ್ಯಗಳಲ್ಲಿ ನಿರತವಾಗಿದೆ.
“ಫ್ಯೂಚರ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ತ್ರಯಂಬಕಂ’ ಚಿತ್ರದ ಹಾಡುಗಳಿಗೆ ಗಣೇಶ್ ನಾರಾಯಣನ್ ಸಂಗೀತ ಸಂಯೋಜನೆಯಿದ್ದು, ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ಸಾಹಿತ್ಯವಿದೆ. ಚಿತ್ರಕ್ಕೆ ಬಿ.ರಾಕೇಶ್ ಛಾಯಾಗ್ರಹಣ, ಸುನೀಲ್ ಕಶ್ಯಪ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ದೃಶ್ಯಗಳಿಗೆ ನವೀನ್‌ಕೃಷ್ಣ ಸಂಭಾಷಣೆ ಬರೆದಿದ್ದಾರೆ.
ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ಹದಿನಾಲ್ಕು ವರ್ಷಗಳಿಂದ ರಾಘಣ್ಣ ಅವರನ್ನು ತೆರೆಮೇಲೆ ನೋಡಿಲ್ಲ ಎಂಬ ದೊಡ್ಮನೆ ಅಭಿಮಾನಿಗಳಿಗೆ ಒಂದೇ ತಿಂಗಳಲ್ಲಿ ರಾಘಣ್ಣ ಎರಡು ಚಿತ್ರಗಳ ಮೂಲಕ ದರ್ಶನ ನೀಡುತ್ತಿದ್ದಾರೆ. “ತ್ರಯಂಬಕಂ’ನಲ್ಲಿ ರಾಘಣ್ಣ ಹೇಗೆ ಕಾಣಲಿದ್ದಾರೆ, ಅವರ ಪಾತ್ರ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.