“ಕಮರೊಟ್ಟು ಚೆಕ್‌ಪೋಸ್ಟ್’ ಅಂದಾಕ್ಷಣ, “ರಂಗಿತರಂಗ’ ಚಿತ್ರದ ಹಾಡೊಂದರಲ್ಲಿ ಬರುವ “ಕಮರೊಟ್ಟು…’ ಎಂಬ ಊರು ನೆನಪಾಗುತ್ತೆ. ಅದೇ ಹೆಸರಿಟ್ಟುಕೊಂಡು ಚಿತ್ರವೊಂದು ತಯಾರಾಗುತ್ತಿದೆ ಅಂತ ಈ ಹಿಂದೆ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಈಗ ಸದ್ದಿಲ್ಲದೆಯೇ ಆ ಚಿತ್ರದ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆಯ ತಯಾರಿಯಲ್ಲಿದೆ ಚಿತ್ರತಂಡ. “ಮಾಮು ಟೀ ಅಂಗಡಿ’ ಚಿತ್ರದ ಬಳಿಕ ಪರಮೇಶ್ ನಿರ್ದೇಶಿಸಿರುವ ಚಿತ್ರವಿದು.
ಹೊಸ ಸುದ್ದಿಯೆಂದರೆ, ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅವರು “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರತಂಡದವರೆಲ್ಲರೂ ಡಾ.ರಾಜಕುಮಾರ್ ಅವರ ಪಕ್ಕಾ ಅಭಿಮಾನಿಗಳು. ಹಾಗಾಗಿ ರಾಘವೇಂದ್ರ ರಾಜಕುಮಾರ್ ಅವರಿಂದ ಫಸ್ಟ್‌ಲುಕ್ ಬಿಡುಗಡೆ ಮಾಡಿಸಬೇಕು ಅಂದುಕೊಂಡು ಅವರಿಂದಲೇ ಬಿಡುಗಡೆ ಮಾಡಿಸಿರುವುದು ವಿಶೇಷ.
“ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ಫಸ್ಟ್‌ಲುಕ್ ಟ್ರೇಲರ್‌ನಲ್ಲೊಂದು ವಿಶೇಷವಿದೆ. ಅದೇನೆಂದರೆ, ನಿರ್ದೇಶಕರು ಡಾ.ರಾಜಕುಮಾರ್ ಹಾಗೂ ವರದಣ್ಣ ಅವರಿಬ್ಬರ ಭಾವಚಿತ್ರದೊಂದಿಗೆ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಅದನ್ನು ವೀಕ್ಷಿಸಿ, ಖುಷಿಗೊಂಡ ರಾಘವೇಂದ್ರ ರಾಜಕುಮಾರ್, ಫಸ್ಟ್‌ಲುಕ್ ಟ್ರೇಲರ್ ಮೆಚ್ಚಿಕೊಂಡಿದ್ದಲ್ಲದೆ, ಸಿನಿಮಾ ನೋಡುವ ಬಯಕೆ ವ್ಯಕ್ತಪಡಿಸಿದ್ದಾರಂತೆ.
ಇನ್ನು ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಊಸರವಳ್ಳಿಯ ಅನಿಮೇಷನ್ ಪಾತ್ರವೊಂದನ್ನು ಚಿತ್ರದುದ್ದಕ್ಕೂ ಬಳಕೆ ಮಾಡಲಾಗಿದೆ. ವಿಶೇಷ ಎನಿಸುವ ಈ ಪ್ರಾಣಿ ಚಿತ್ರದ ಮತ್ತೂಂದು ಹೈಲೆಟ್ ಆಗಿದ್ದು, ಚಿತ್ರದಲ್ಲಿನ್ನೂ ಹಲವು ವಿಶೇಷತೆಗಳೂ ತುಂಬಿಕೊಂಡಿವೆ ಎಂಬುದು ಪರಮೇಶ್ ಮಾತು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಎಂದಷ್ಟೇ ಹೇಳುವ ಪರಮೇಶ್, ಚೆಕ್‌ಪೋಸ್ಟ್ ಬಳಿ ನಡೆದ ಆಕ್ಸಿಡೆಂಟ್‌ವೊಂದರ ಸತ್ಯಘಟನೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಸನತ್ ಮತ್ತು ಉತ್ಪಲ್ ನಾಯಕರಾದರೆ, ಅವರಿಗೆ ಸ್ವಾತಿ ಕೊಂಡೆ ಹಾಗೂ ಅಹಲ್ಯಾ ನಾಯಕಿಯರಾಗಿ ನಟಿಸಿದ್ದಾರೆ. ಎ.ಪಿ.ಪ್ರೊಡಕ್ಷನ್ ಮತ್ತು ಸ್ವಪ್ನ ಕ್ರಿಯೇಷನ್ಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣಗೊಂಡಿದೆ. ಮಡಿಕೇರಿ, ಮಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಎ.ಟಿ. ರವೀಶ್ ಅವರ ಸಂಗೀತವಿದೆ.