ಹೊಸದಿಲ್ಲಿ : ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಈಚೆಗೆ ತೆರೆಕಂಡ ಹೊಸ ಚಿತ್ರ “ರಯೀಸ್’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ವಿಕ್ರಮ ಸಾಧಿಸಿದ್ದು 300 ಕೋಟಿ ರೂ.ಗಳನ್ನು ದಾಟಿರುವ ಸಾಧನೆ ಮಾಡಿದೆ.
ಶಾರುಖ್ ಖಾನ್ ಅಭಿಮಾನಿಗಳನ್ನು ಬಹುವಾಗಿ ರಂಜಿಸಿರುವ ರಯೀಸ್ ಚಿತ್ರ, ಶಾರುಖ್‌ಗೆ ಹೊಸ ಇಮೇಜ್ ನೀಡಿದೆ. ಮೇಲಾಗಿ ಈ ಚಿತ್ರದಲ್ಲಿನ ಶಾರುಖ್ ನಟನೆಯನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೆಚ್ಚಿಕೊಂಡು ಖಾನ್ ಅವರನ್ನು ಬೆನ್ನು ತಟ್ಟಿ ಪ್ರಶಂಸಿಸಿದ್ದಾರೆ.
“ಪರ್ಜಾನಿಯಾ’ ಚಿತ್ರದ ಮೂಲಕ ಜನಪ್ರಿಯತೆಯ ಶಿಖರವೇರಿದ್ದ ಚಿತ್ರ ನಿರ್ದೇಶಕ ರಾಹುಲ್ ಧೋಲಕಿಯಾ ಅವರ “ರಯೀಸ್’ ಕ್ಲಾಸ್ ಹಾಗೂ ಮಾಸ್ ಅನ್ನು ಏಕಪ್ರಕಾರವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು ಚಿತ್ರದ ಜಾಗತಿಕ ಗಳಿಕೆ ಕೂಡ ಎಲ್ಲರ ಹುಬ್ಬೇರಿಸಿದೆ.
ಸಿನೆಮಾ ಉದ್ಯಮ ರಂಗದ ತಜ್ಞ ಎನಿಸಿರುವ ರಮೇಶ್ ಬಾಲಾ ಅವರು ಮಾಡಿರುವ ಟ್ವೀಟ್ ಅನ್ನು ದ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖೀಸಿ 2017ರ ಫೆ.6ರಂದು ಚಿತ್ರದ ಜಾಗತಿಕ ಗಳಿಕೆ 304 ಕೋಟಿ ಆಗಿದ್ದು ದೇಶೀಯ ಗಳಿಕೆ 150 ಕೋಟಿ ದಾಟಿರುವುದಾಗಿ ವರದಿ ಮಾಡಿದೆ.
ರಯೀಸ್‌ನಲ್ಲಿ ಶಾರುಖ್ ಖಾನ್ ಅವರದ್ದು ಗ್ಯಾಂಗ್‌ಸ್ಟರ್ ಅವತಾರ. ಈ ಹೊಸ ಗೆಟಪ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿರುವ ಶಾರುಖ್ ಅವರ ಅಭಿನಯವನ್ನು ಅಭಿಮಾನಿಗಳು ಸಹಜವಾಗಿಯೇ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮುಖ್ಯ ಪಾತ್ರದಲ್ಲಿದ್ದು ಪಾಕ್ ನಟಿ ಮಾಹಿರಾ ಖಾನ್ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
2017ರ ಜನವರಿ 25ರಂದು ಶಾರುಖ್ ಖಾನ್ ಅವರ ರಯೀಸ್ ಹಾಗೂ ಹೃತಿಕ್ ರೋಶನ್ ಅವರ ಕಾಬಿಲ್ – ಬಿಡುಗಡೆಗೊಂಡಿದ್ದು ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಮಾಡಿವೆ.