Advertisement

ದನಗಳ ಕೊಂಬುಗಳಿಗೆ ರೇಡಿಯಂ : ರಾತ್ರಿ ವೇಳೆ ಅಪಘಾತ ತಡೆಗೆ ಪೊಲೀಸ್‌ ಇಲಾಖೆಯಿಂದ ವಿನೂತನ ಕ್ರಮ

06:53 PM Oct 05, 2020 | sudhir |

ಮುಂಡಗೋಡ: ಪಟ್ಟಣ ಪ್ರಮುಖ ರಸ್ತೆಗಳಲ್ಲಿ ರಾತ್ರಿ ದನಕರಗಳು ಮಲಗುವ ಕಾರಣ ಅಪಘಾತ ಸಂಭವಿಸದಂತೆ ಮುಂಜಾಗ್ರತ
ಕ್ರಮವಾಗಿ ಪೊಲೀಸ್‌ ಇಲಾಖೆ ಶನಿವಾರ ರಾತ್ರಿ ರಸ್ತೆ ಮೇಲೆ ಮಲಗುವ ದನಗಳ ಕೊಂಬುಗಳಿಗೆ ರೇಡಿಯಂ ಅಂಟಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ರಾತ್ರಿ ದನಕರಗಳು ಮಲಗುತ್ತಿದ್ದು, ಇದರಿಂದ ವೇಗವಾಗಿ ಬರುವ ವಾಹನಗಳು
ದನಕರಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಇದರಿಂದ ಮುಂಜಾಗ್ರತ ಕ್ರಮ ವಹಿಸಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಭುಗೌಡ ಡಿ.ಕೆ ಮಾರ್ಗದರ್ಶನದಂತೆ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿ ರಾತ್ರಿ ವೇಳೆ ರಸ್ತೆ ಮೇಲೆ ಮಲಗುವ ದನಗಳ ಕೊಂಬಿಗೆ ರೇಡಿಯಂ ಸ್ಟಿಕರ್‌ ಅಂಟಿಸಿದರು. ಈ ರೇಡಿಯಂ ಸ್ಟಿಕರ್‌ ವಾಹನ ಸವಾರರಿಗೆ ದೂರದಿಂದಲೆ ಕಾಣುತ್ತದೆ. ಅದಕ್ಕಾಗಿ ಪೊಲೀಸ್‌ ಇಲಾಖೆಯವರು ರಸ್ತೆಯ ಮೇಲೆ ಮಲಗುವ ಎಲ್ಲ ದನಗಳಿಗೆ ರೇಡಿಯಂ ಅಂಟಿಸಿ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಿದರು.

Advertisement

ದನಗಳ ಮಾಲಿಕರ ಸಭೆ: ತಾಲೂಕಿನ ಯಲ್ಲಾಪುರ ಹಾಗೂ ಹುಬ್ಬಳ್ಳಿ ಮಾರ್ಗದ ಗ್ರಾಮೀಣ ಭಾಗದಲ್ಲಿ ಗೌಳಿ ಸಮುದಾಯದವರು ನೂರಾರು ದನಗಳನ್ನು ಸಾಕಾಣಿಕೆ ಮಾಡುತ್ತಾರೆ. ಇವರ ಹತ್ತಾರು ದನಗಳು ರಾತ್ರಿ ವೇಳೆ ಹೆದ್ದಾರಿ ಮೇಲೆ ಮಲಗುವುದು ಹಾಗೂ ನಿಲ್ಲುವುದು ಮಾಡುತ್ತವೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿರುವ ಕಾರಣ ಗೌಳಿ ಸಮುದಾಯದ ಪ್ರಮುಖರೊಂದಿಗೆ ಪೊಲೀಸ್‌ ಅಧಿಕಾರಿಗಳು ಸಭೆ ನಡೆಸಿ ದನಗಳು ರಸ್ತೆ ಮೇಲೆ ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು ಹಾಗೂ ಎಲ್ಲ ದನಗಳ ಕೊಂಬಿಗೆ ರೇಡಿಯಂ ಅಥವಾ ಕೆಂಪು ಬಣ್ಣ ಹಚ್ಚುವಂತೆ ಸೂಚಿಸಿದ್ದಾರೆ. ಇದಕ್ಕೆ ಗೌಳಿ ಸಮುದಾಯದವರು ಒಪ್ಪಿಗೆ ಸೂಚಿಸಿದ್ದಾರೆ.

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ: ರಸ್ತೆ ಮೇಲೆ ಮಲಗುವ ದನಗಳಿಂದ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆಯವರು ದನಗಳ ಕೊಂಬಿಗೆ ರೇಡಿಯಂ ಅಂಟಿಸಿದ್ದಾರೆ. ಪಟ್ಟಣ ಪಂಚಾಯತದವರು
ಮಾಡಬೇಕಿದ್ದ ಕೆಲಸವನ್ನು ಪೊಲೀಸ್‌ ಇಲಾಖೆಯವರು ಮಾಡಿದ್ದಾರೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next