ರಾಧಿಕಾ ಚೇತನ್ ಖುಷಿಯಾಗಿದ್ದಾರೆ. ಕಾರಣ ಈ ವರ್ಷ ಅವರ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಲಿವೆ. ಇದರ ಮೊದಲ ಹಂತವಾಗಿ, ಈಗಾಗಲೇ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರವು ಬಿಡುಗಡೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಅಸತೋಮ ಸದ್ಗಮಯ ಮತ್ತು ಹರಿ ಆನಂದ್ ನಿರ್ದೇಶನದ ಚೇಸ್ ಚಿತ್ರಗಳು ಸಹ ಬಿಡುಗಡೆಯಾಗಲಿವೆ.
ಅಸತೋಮ ಸದ್ಗಮಯ ಚಿತ್ರದಲ್ಲಿ ರಾಧಿಕಾ ಅವರದ್ದು ವಿದೇಶದಿಂದ ಏನನ್ನೋ ಹುಡುಕಿ ಬರುವ ಹುಡುಗಿಯ ಪಾತ್ರವಂತೆ. ನಿಜ ಹೇಳಬೇಕೆಂದರೆ, ಈ ಚಿತ್ರದಲ್ಲಿ ಅವರೊಬ್ಬರೇ ಹಳಬರು ಎನ್ನಬಹುದು. ಮಿಕ್ಕಂತೆ ಚಿತ್ರದ ಕಲಾವಿದರು, ತಂತ್ರಜ್ಞರ ಪಟ್ಟಿಯಲ್ಲಿ ಸಾಕಷ್ಟು ಹೊಸಬರು ಇದ್ದಾರೆ. ಇಂಥದ್ದೊಂದು ಸಂಪೂರ್ಣ ಹೊಸ ತಂಡದ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ಸದ್ಯಕ್ಕೆ ಎಲ್ಲಲ್ಲೂ ಸರ್ಕಾರಿ ಶಾಲೆಗಳ ದುಸ್ಥಿತಿಯ ಕುರಿತಾಗಿ ಚರ್ಚೆಯಾಗುತ್ತಿದ್ದು, ಈ ಚಿತ್ರ ಸಹ ಸರ್ಕಾರಿ ಶಾಲೆ ಕುರಿತಂತಹ ಚಿತ್ರವಂತೆ. ಈಗಿನ ಸರ್ಕಾರಿ ಶಾಲೆಯ ದುಸ್ಥಿತಿ, ಅಲ್ಲಿ ಓದುವ ಮಕ್ಕಳ ಮನಸ್ಥಿತಿ ಕುರಿತು ಕಥೆ ಸಾಗಲಿದೆ. ಮನರಂಜನೆಯ ಮೂಲಕ ಸರ್ಕಾರಿ ಶಾಲೆಯ ಕುರಿತಾದ ಕೆಲವು ಅಪರೂಪದ ಸಂಗತಿಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ. ಇನ್ನು ಚಿತ್ರ ಸಹ ಸೆನ್ಸಾರ್ ಆಗಿದ್ದು, ಇದೇ ತಿಂಗಳು ಬಿಡುಗಡೆಯಾಗುತ್ತಿದೆ.
ಇನ್ನು ಇತ್ತೀಚೆಗೆ ಅವರು ಹರಿ ಆನಂದ್ ನಿರ್ದೇಶನದ ಚೇಸ್ ಚಿತ್ರಕ್ಕೆ ಉತ್ತರಭಾರತದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದು, ಆ ಚಿತ್ರದ ಬಿಡುಗಡೆಗೂ ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲಿ ಜುಗಾರಿ ಅವಿನಾಶ್ ಹೀರೋ ಆಗಿ ನಟಿಸಿದರೆ, ಶೀತಲ್ ಶೆಟ್ಟಿ, ಅರ್ಜುನ್ ಯೋಗೇಶ್ ಇತರರು ನಟಿಸಿದ್ದಾರೆ. ಹಿಂದಿಯ ಎಬಿಸಿಡಿ ಖ್ಯಾತಿಯ ನೃತ್ಯ ನಿರ್ದೇಶಕ ಸುಶಾಂತ್ ಪೂಜಾರಿ ಕೂಡ ನಟಿಸಿದ್ದಾರೆ. ಅನಂತ್‌ಅರಸ್ ಛಾಯಗ್ರಹಣವಿದೆ. ಕಾರ್ತಿಕ್ ಸಂಗೀತ ನೀಡಿದ್ದಾರೆ.
ಇನ್ನು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು ರಾಧಿಕಾ. ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆ ಈ ಚಿತ್ರ ಪಡೆದಿತ್ತು. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅವರು ಹಿರಿಯ ನಟ ಅನಂತ್ ನಾಗ್ ಅವರ ಜೊತೆಗೆ ಮೊದಲ ಬಾರಿಗೆ ಕೆಲಸ ಮಾಡಿ, ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದರಂತೆ. ದಿ ಇಂಟರ್ನ್ ಎನ್ನುವ ಹಾಲಿವುಡ್ ಚಿತ್ರದಿಂದ ಸ್ಫೂರ್ತಿ ಪಡೆದಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋತರೂ, ರಾಧಿಕಾ ಅವರ ಅಭಿನಯದ ಬಗ್ಗೆ ಎಲ್ಲ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು.
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಸೋಲನ್ನು ಅಸತೋಮ ಸದ್ಗಮಯ ಮತ್ತು ಚೇಸ್ ಚಿತ್ರಗಳು ಮರೆಸುತ್ತವೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡ ಬೇಕಿದೆ.