ಸಿನಿಮಾಗಳಲ್ಲಿ ಬಿಝಿಯಾಗಿರುವ ನಟಿ ರಚಿತಾ ರಾಮ್ ಸದ್ದಿಲ್ಲದೇ ಆಲ್ಬಂ ಸಾಂಗ್ ವೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಅದು “ಲಕಲಕ ಲ್ಯಾಂಬೋರ್ಗಿನಿ’ಯಲ್ಲಿ. ಇದು ಚಂದನ್ ಶೆಟ್ಟಿಯವರ ಮತ್ತೂಂದು ಆಲ್ಬಂ. ಚಂದನ್ ಶೆಟ್ಟಿಯವರೇ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ನಿರ್ದೇಶನವನ್ನು ನಂದಕಿಶೋರ್ ಮಾಡಿದ್ದಾರೆ. ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್. ಕೇಶವ್ ಈ ಹಾಡನ್ನು ನಿರ್ಮಿಸಿದ್ದಾರೆ.
ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದೆ. ಮೂಲತಃ ರೈತರಾಗಿರುವ ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಿದ್ದಾರೆ. ಈ ಮೂಲಕ ಪುಟ್ಟ ಮಗಳಿಗೆ ಕಾಸ್ಟ್ಲಿ ಗಿಫ್ಟ್ ನೀಡಿದ್ದಾರೆ.
ಹಾಡಿನ ಬಗ್ಗೆ ಮಾತನಾಡಿದ ಚಂದನ್,” ಈ ಹಾಡು ಜುಲೈ ತಿಂಗಳಲ್ಲಿ ಆರಂಭವಾಗಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಇರಾದೆಯೂ ಇತ್ತು. ಆದರೆ ಕೊರೊನಾ ಇದಕ್ಕೆಲ್ಲ ಅಡ್ಡಿಯಾಯಿತು. ಕಾಕತಾಳೀಯ ಎಂಬಂತೆ ಹೊಸ ವರ್ಷಕ್ಕೆ ಈ ಹಾಡು ಬಿಡುಗಡೆಯಾಗಿದೆ. ಈ ಹಾಡು ಆಗಲು ಕಾರಣಕರ್ತರಾದ ಎಲ್ಲರಿಗ ಥ್ಯಾಂಕ್ಸ್’ ಎಂದರು.
ನಿರ್ಮಾಪಕ ಕೇಶವ್ ಅವರಿಗೆ ಒಂದೊಳ್ಳೆಯ ಆಲ್ಬಂ ನಿರ್ಮಿಸಿರುವ ಖುಷಿ ಇದೆ. “ನನ್ನ ಮಗಳು ಬಿಂದ್ಯಾಳನ್ನು ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ನಂತರ ಕೆ.ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿದೆ. ಈ ಹಾಡು ನಿರ್ಮಾಣವಾಗಲು ನನ್ನ ಮಗಳು ಬಿಂದ್ಯಾ ಕಾರಣ. ಚಂದನ್ ಶೆಟ್ಟಿ , ರಚಿತಾರಾಂ ಜೊತೆ ನನ್ನ ಮಗಳು ಬಿಂದ್ಯಾ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ’ ಎನ್ನುವುದು ಕೇಶವ್ ಅವರ ಮಾತು.
ಇದನ್ನೂ ಓದಿ:ಟಾಲಿವುಡ್ ಬೆಡಗಿ Rashmi Gautam ಬ್ಯೂಟಿಫುಲ್ ಗ್ಯಾಲರಿ
ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್ ಇದೇ ಮೊದಲು ನಿರ್ದೇಶನ ಮಾಡಿದ್ದೀನಿ. ಮಕ್ಕಳು ಹುಟ್ಟುಹಬ್ಬಕ್ಕೆ ಚಾಕ್‌ಲೇಟ್, ಬಿಸ್ಕತ್ತು ಮುಂತಾದವುಗಳನ್ನು ಕೇಳುತ್ತಾರೆ. ಆದರೆ ಈ ಹುಡುಗಿ ಅವರ ಅಪ್ಪನ ಬಳಿ ಆಲ್ಬಂ ಸಾಂಗ್ ಮಾಡಲು ಕೇಳಿ, ನೂರು ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು ನಿಜಕ್ಕೂ ಶ್ಲಾಘನೀಯ ಎಂದರು ನಿರ್ದೇಶಕ ನಂದ ಕಿಶೋರ್.
ಹಾಡಿನಲ್ಲಿ ಶೇಖರ್ ಚಂದ್ರ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ.ಕೆರೆ ಅವರ ಕಲಾ ನಿರ್ದೇಶನ ಈ ಹಾಡಿಗಿದೆ.