ಜೈಪುರ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಬುಧವಾರ ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದಿದೆ. ಮೊದಲ ಪಂದ್ಯವನ್ನು ಭಾರತ ತಂಡ ಐದು ವಿಕೆಟ್ ಅಂತರದಿಂದ ಗೆದ್ದುಕೊಂಡಿದೆ.
ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನ ಆಟಗಾರ ರಚಿನ್ ರವೀಂದ್ರ ಭಾರತದ ಅಭಿಮಾನಗಳ ಗಮನ ಸೆಳೆದರು. ತಮ್ಮ ಬ್ಯಾಟ್‌ನಿಂದ ಹೆಚ್ಚು ಸದ್ದು ಮಾಡದಿದ್ದರೂ ಅವರು ತಮ್ಮ ವಿಶಿಷ್ಟ ಹೆಸರಿನಿಂದ ಮೈದಾನದ ಹೊರಗೆ ಗಮನ ಸೆಳೆದರು. 21 ವರ್ಷದ ಭಾರತೀಯ ಮೂಲದ ಹುಡುಗನ ಮೊದಲ ಹೆಸರು, ‘ರಚಿನ್’, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ನ್ಯೂಜಿಲ್ಯಾಂಡ್ ನ ವೆಲ್ಲಿಂಗ್ಟನ್ ನವರಾದ ರಚಿನ್ ರವೀಂದ್ರ ಮೂಲತಃ ಭಾರತೀಯರು. ತಂದೆ ರವಿ ಕೃಷ್ಣಮೂರ್ತಿ ಮತ್ತು ತಾಯಿ ದೀಪಾ ಕೃಷ್ಣಮೂರ್ತಿ. 2016ರ U19 ವಿಶ್ವಕಪ್ ಮತ್ತು 2018ರ U19 ಕ್ರಿಕೆಟ್ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗಾಗಿ ಆಡಿದ್ದ ರವಿನ್ ತಮ್ಮ ಆಫ್-ಸೀಸನ್‌ಗಳಲ್ಲಿ ಭಾರತದಲ್ಲಿಯೂ ಆಡಿದರು.
ಇದನ್ನೂ ಓದಿ:ಭರ್ಜರಿ ಜಯದೊಂದಿಗೆ ರಾಹುಲ್-ರೋಹಿತ್ ಯುಗದ ಶುಭಾರಂಭ
ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಾದ ರವಿ ಮತ್ತು ದೀಪಾ ದಂಪತಿ ಸಚಿನ್ ತಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಬಹುದೊಡ್ಡ ಫ್ಯಾನ್ಸ್. ಹೀಗಾಗಿಯೇ ಮಗನಿಗೆ ರಾಹುಲ್ ದ್ರಾವಿಡ್ ಅವರ ಹೆಸರಿನ ‘ರ’ ಮತ್ತು ಸಚಿನ್ ತೆಂಡೂಲ್ಕರ್ ಹೆಸರಿನ ‘ಚಿನ್’ ಜೋಡಿಸಿ ‘ರಚಿನ್’ ಎಂದು ನಾಮಕರಣ ಮಾಡಿದ್ದರು.