Advertisement

Rabkavi Banhatti; ನಿವೃತ್ತ ಪ್ರಾಚಾರ್ಯ ಎಂ.ಎಸ್.ಮುನ್ನೊಳ್ಳಿ ನಿಧನ

06:41 PM Sep 21, 2023 | Team Udayavani |

ರಬಕವಿ-ಬನಹಟ್ಟಿ: ಇಲ್ಲಿನ ಎಸ್ ಆರ್ ಎ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ.ಎಸ್. ಮುನ್ನೊಳ್ಳಿ(97) ಗುರುವಾರ ನಿಧನಹೊಂದಿದ್ದಾರೆ. ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement

ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ.ಸ.ಜ.ನಾಗಲೋಟಿಮಠ, ಐಪಿಎಸ್ ಅಧಿಕಾರಿ ಶಂಕರ ಬಿದರಿ, ಅಂತಾರಾಷ್ಟ್ರೀಯ ಗಣಿತಜ್ಞ ಡಾ.ವಿ.ಆರ್. ಕುಳ್ಳಿ, ಖ್ಯಾತ ಕಾದಂಬರಿಕಾರ ದು.ನಿಂ.ಬೆಳಗಲಿ, ಅಂತಾರಾಷ್ಟ್ರೀಯ ಖ್ಯಾತಿಯ ವನ್ಯ ಜೀವಿ ಚಿತ್ರಕಾರ ಜಯವಂತ ಮುನ್ನೊಳ್ಳಿ, ಪುಣೆಯ ಶ್ರೇಷ್ಠ ಉದ್ದಿಮೆದಾರ ಚನಬಸಪ್ಪ ಸುಟ್ಟಟ್ಟಿ, ಶಾಸಕ ಜಗದೀಶ ಗುಡಗುಂಟಿ, ಸಹಕಾರ ಸಂಘಗಳ ಹಿಂದಿನ ಜಂಟಿ ನಿರ್ದೇಶಕ ಜಿ.ಎಂ.ಪಾಟೀಲ, ಮಕ್ಕಳ ಸಾಹಿತಿ ಜಯವಂತ ಕಾಡದೇವರ, ವಿನೋದ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಸೇರಿದಂತೆ ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ನೂರಾರು ಜನರಿಗೆ ವಿದ್ಯಾರ್ಜನೆ ಮಾಡಿದ್ದರು.

ಮೂಲತಃ ನೇಕಾರಿಕೆಯ ಕುಟುಂಬದಿಂದ ಬಂದವರಾಗಿದ್ದ ಮುನ್ನೊಳ್ಳಿಯವರು ಎಸ್ ಆರ್ ಎ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ ನಂತರ 25 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಾಚಾರ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು. ನಂತರ ಜನತಾ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದರು.

ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಆವರಣದಲ್ಲಿ ತಮ್ಮ ನಿವೃತ್ತಿ ವೇತನದಲ್ಲಿ ಬಸವೇಶ್ವರ ಮತ್ತು ಅಕ್ಕಮಹಾದೇವಿ ಸುಂದರ ಮೂರ್ತಿಗಳನ್ನು ಮತ್ತು ಅವುಗಳಿಗೆ ಮಂಟಪ ಕೂಡಾ ನಿರ್ಮಾಣ ಮಾಡಿದ್ದರು. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಪಾರ ದೇಣಿಗೆಯನ್ನು ನೀಡಿದ್ದರು. ಉತ್ತಮ ಯೋಗ ಪಟುಗಳಾಗಿದ್ದರು.

ಎಂ.ಎಸ್. ಮುನ್ನೊಳ್ಳಿ ದಕ್ಷ ಶಿಕ್ಷಕ ಮತ್ತು ಆಡಳಿತಾಧಿಕಾರಿಯಾಗಿದ್ದರು. ಅವರು ಶಿಕ್ಷಕರ ಶಿಕ್ಷಕರಾಗಿದ್ದರು ಎಂದು ಅವರ ಶಿಷ್ಯ ಶಂಕರ ಬಿದರಿ ತಿಳಿಸಿದರು.

Advertisement

ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 10 ಕ್ಕೆ ಬನಹಟ್ಟಿಯ ಸೋಮವಾರ ಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next