Advertisement

ರಬಕವಿ-ಬನಹಟ್ಟಿ: ಅನಾರೋಗ್ಯಕ್ಕೆ ತುತ್ತಾದ ಆರೋಗ್ಯ ಕೇಂದ್ರ

04:33 PM May 23, 2023 | Team Udayavani |

ರಬಕವಿ-ಬನಹಟ್ಟಿ: ನಗರದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ವಿವಿಧ ಸೌಕರ್ಯಗಳಿಲ್ಲದೆ ಅನಾರೋಗ್ಯದಿಂದ ಬಳಲುತ್ತಿದೆ. ದಿನಂಪ್ರತಿ ಆಗಮಿಸುವ ನೂರಾರು ರೋಗಿಗಳಿಗೆ ಆಸ್ಪತ್ರೆ ಆವರಣದಲ್ಲಿ ಕುಳಿತುಕೊಳ್ಳಲು ಸಮರ್ಪಕವಾದ ಆಸನಗಳ ವ್ಯವಸ್ಥೆಯಿಲ್ಲ. ರೋಗಿಗಳಿಗೆ ಕುಡಿಯಲು ಶುದ್ಧ ನೀರು ಗಗನಕುಸುಮವಾಗಿದ್ದು, ಟ್ಯಾಂಕ್‌ನಲ್ಲಿ ಜಿಡ್ಡುಗಟ್ಟಿದ ನೀರನ್ನೇ ರೋಗಿಗಳು ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಡಾಕ್ಟ್ರಿಗೆ ಫೋನ್‌ ಮಾಡ್ಬೇಕ್ರೀ: ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಗುತ್ತಿಗೆ ಆಧಾರದ ಮೇಲಿರುವ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿಯೇ ತಮ್ಮ ಸೇವೆಗೆ ಮುಂದಾಗಿದ್ದಾರೆ. ಕೆಲ ಸಂದರ್ಭಗಳಲ್ಲಿ ಡಾಕ್ಟ್ರಿಗೆ ಫೋನ್‌ ಮಾಡ್ಬೇಕು. ಇದರಿಂದ ರೋಗಿಗಳು ತುಂಬಾ ಪರದಾಡುವಂತ ಸ್ಥಿತಿಯಾಗಿದೆ.

ಕೂಡಲೇ ಕಾಯಂ ವೈದ್ಯರ ನೇಮಕಾತಿ ಅನಿವಾರ್ಯವಿದೆ ಎಂದು ಕೆಲ ರೋಗಿಗಳು ಅಳಲನ್ನು ತೋಡಿಕೊಂಡರು. ಇಡೀ ತೇರದಾಳ ಕ್ಷೇತ್ರದಲ್ಲಿಯೇ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಏಕೈಕ ನಗರಸಭೆ ಹೊಂದಿರುವ ರಬಕವಿ-ಬನಹಟ್ಟಿ ಜನತೆಗೆ ಸಮುದಾಯ ಆಸ್ಪತ್ರೆ ಗಗನಕುಸುಮವಾಗಿದೆ.

ಡಯಾಲಿಸಸ್‌ ಕೇಂದ್ರಕ್ಕೆ ಒತ್ತಾಯ: ಕೂಡಲೇ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ, ಎಲ್ಲ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂದಾಗಬೇಕೆಂದು ಸ್ಥಳೀಯ ಸಂಘಟನೆಗಳು ಒತ್ತಾಯಿಸಿವೆ. ಈ ಭಾಗದಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾದ ಬಡ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಡಯಾಲಿಸಿಸ್‌ಗೆ ದೂರದ ಬಾಗಲಕೋಟೆ ಅಥವಾ ವಿಜಯಪುರಕ್ಕೆ ತೆರಳಲು ಆರ್ಥಿಕವಾಗಿ ಸಬಲರಾಗಿಲ್ಲ. ಒಂದು ತಿಂಗಳಿಗೆ ರೋಗಿಯ ವೈದ್ಯಕೀಯ ಖರ್ಚು 10ರಿಂದ 12 ಸಾವಿರ ರೂ.ವರೆಗೆ ಆಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇಷ್ಟೊಂದು ವೆಚ್ಚ ಸಾಧ್ಯವಾಗದ ಮಾತು. ಕೂಡಲೇ ಅವಳಿನಗರಕ್ಕೆ ಸಂಬಂಧಪಟ್ಟಂತೆ ಡಯಾಲಿಸಿಸ್‌ ಕೇಂದ್ರವನ್ನು ಒದಗಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

ವಸತಿ ಗೃಹಗಳ ದುರವಸ್ಥೆ: ಇನ್ನು ಸಮುದಾಯ ಆಸ್ಪತ್ರೆಯ ಹಿಂದೆಯೇ ಇರುವ ವಸತಿ ಗೃಹಗಳಿಗೆ ತೆರಳಬೇಕಾದರೆ ಮುಳ್ಳಿನ ಕಂಟಿಯಲ್ಲಿಯೇ ಸಂಚರಿಸಬೇಕು. ವಿದ್ಯುತ್‌ ಸಮಸ್ಯೆಯೊಂದಿಗೆ ನೀರಿನ ಸೌಲಭ್ಯವಿಲ್ಲ. ಅಲ್ಲದೆ ಇಲ್ಲಿನ ಶೌಚಾಲಯಗಳೂ ಸಹಿತ ಹಾಳುಬಿದ್ದು ಗಬ್ಬೆದ್ದು ನಾರುತ್ತಿವೆ. ಕೇವಲ ಐದು ವಸತಿ ಗೃಹಗಳಿದ್ದು, ಇಲ್ಲಿನ ಪ್ರಮುಖ ವೈದ್ಯರಿಗೆ ಅಥವಾ ಸಿಬ್ಬಂದಿಗೆ
ವ್ಯವಸ್ಥೆಯಿಲ್ಲ. ವಿಶ್ರಾಂತಿಗಾಗಿ ಒಂದು ಕೊಠಡಿ ಇಲ್ಲದೆ ಪರದಾಡುವಂತ ಸ್ಥಿತಿ ಇಲ್ಲಿನ ವೈದ್ಯರದ್ದಾಗಿದೆ.

Advertisement

*ಕಿರಣ ಶ್ರೀಶೈಲ ಆಳಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next