ರಬಕವಿ-ಬನಹಟ್ಟಿ: ಸ್ಥಳೀಯ ಬನಹಟ್ಟಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆ ಗಗನಕ್ಕೇರುತ್ತಿದೆ. ವಾರದಿಂದ ವಾರಕ್ಕೆ ಬೆಲೆ ಏರುತ್ತಲೇ ಇದೆ. ಮಾರಾಟಗಾರರು ಕೂಡಾ ದಾಸ್ತಾನು ಮಾಡಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಹಳಷ್ಟು ಖರೀದಿ ಮಾಡಿ ಹಾನಿ ಅನುಭವಿಸುವ ಬದಲು ಸ್ವಲ್ಪ ಪ್ರಮಾಣದಲ್ಲಿ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.
ಈ ಭಾಗಕ್ಕೆ ಒಣ ಮೆಣಸಿನಕಾಯಿ ಹುಬ್ಬಳ್ಳಿ-ರಾಯಚೂರನಿಂದ ಬರುತ್ತದೆ. ಕಳೆದ ಬಾರಿ ಸುರಿದ ಮಳೆ ಮತ್ತು ಮೆಣಸಿನಕಾಯಿ ಬೇರೆ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಬೆಲೆ ಹಿಡಿತಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಮೆಣಸಿನಕಾಯಿ ಮಾರಾಟಗಾರರು.
ಮೆಣಸಿನಕಾಯಿ ಬೆಲೆ ಕೇಳಿದ ಕೂಡಲೇ ಖರೀದಿಸಲು ಗ್ರಾಹಕರು ಧೈರ್ಯ ಮಾಡುತ್ತಿಲ್ಲ. ಇನ್ನು ಬೇಸಿಗೆ ಮುಕ್ತಾಯದ ಹಂತದಲ್ಲಿರುವಾಗ ಖರೀದಿಸುವವರ ಸಂಖ್ಯೆ ಹೆಚ್ಚಿರುವುದು ಸಹ ಬೆಲೆ ಏರಿಕೆಗೆ ಮತ್ತೂಂದು ಕಾರಣ ಎನ್ನಲಾಗಿದೆ.
ಬ್ಯಾಡಗಿ ಮೆಣಸಿನಕಾಯಿಯಲ್ಲಿಯೇ ಹತ್ತಾರು ನಮೂನೆಗಳಿವೆ. 450 ರೂ. ಗಳಿಂದ ಆರಂಭವಾಗುವ ಮೆಣಸಿನಕಾಯಿ 850 ರೂ.
ಗಳಿಗೆ ದೊರೆಯುತ್ತದೆ. ಬಳ್ಳಾರಿ ಬ್ಯಾಡಗಿಯ ಮೆಣಸಿನಕಾಯಿ ದರ 350 ರೂ. ರಿಂದ 400ರವರೆಗೆ ದೊರೆಯುತ್ತದೆ. ಗುಂಟೂರ
ಮೆಣಸಿನಕಾಯಿ ದರ 200 ರಿಂದ ರೂ 350 ರವರೆಗೆ ಮಾರಾಟವಾಗುತ್ತಿದೆ.
Related Articles
ಸದ್ಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಅರ್ಧದಷ್ಟು ಇರಬೇಕಿತ್ತು. ಆದರೆ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದರಿಂದ
ಗ್ರಾಹಕರು ಕೂಡಾ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆಣಸಿನಕಾಯಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಬಡ ವರ್ಗದ ಜನರು ಒಣ ಮೆಣಸಿನಕಾಯಿ ಬದಲು ಮನೆಯಲ್ಲಿ ಹಸಿ ಮೆಣಸಿನಕಾಯಿಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಎರಡು ದಶಕಗಳಲ್ಲಿ ಬೆಲೆಯಲ್ಲಿ ಇಷ್ಟೊಂದು ಏರು ಪೇರು ಆಗಿರಲಿಲ್ಲ.
ಆದರೆ ಈಗ ಮಾರಾಟಗಾರರಿಗೂ ಮತ್ತು ಖರೀದಿ ಮಾಡುವ ಗ್ರಾಹಕರಿಗೂ ಮೆಣಸಿನಕಾಯಿ ಮತ್ತಷ್ಟು ಖಾರವಾಗಿ ಪರಿಣಮಿಸಿದೆ.
ಮೊದಲು ಗುಣಮಟ್ಟದ ಬ್ಯಾಡಗಿ ಮೆಣಸಿನಕಾಯಿಯನ್ನೇ ಹತ್ತಾರು ಚೀಲಗಳಷ್ಟು ಖರೀದಿಸುತ್ತಿದ್ದೆವು. ಈಗ ಬೆಲೆ ಹೆಚ್ಚಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಬೆಲೆಯ ಅನಿಶ್ಚಿತತೆಯಿಂದ ಕೇವಲ ಒಂದೆರಡು ಚೀಲಗಳನ್ನು ಮಾತ್ರ ಖರೀದಿಸಿದ್ದೇವೆ.
ಸಂಜಯ ಸುಟ್ಟಟ್ಟಿ, ಮೆಣಸಿನಕಾಯಿ
ಮಾರಾಟಗಾರ.
ಇಂದಿನ ದಿನಮಾನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು, ಅದರಲ್ಲೂ ಎಲ್ಲದಕ್ಕೂ ಬೇಕಾಗುವ ಕಾರದ ಒಣಮೆಣಸಿನಕಾಯಿ ಬೆಲೆ ಹೆಚ್ಚಾಗಿರುವುದರಿಂದ ಬಡವರಿಗೆ ದುಬಾರಿಯಾಗಿದೆ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ.
ಬಸವರಾಜ ಪಟ್ಟಣ, ಗ್ರಾಹಕರು, ಬನಹಟ್ಟಿ
*ಕಿರಣ ಶ್ರೀಶೈಲ ಆಳಗಿ