ರಬಕವಿ-ಬನಹಟ್ಟಿ: ಗೊಲಭಾವಿ ತೇರದಾಳ ರಸ್ತೆಯ ರೈತ ಧರೆಪ್ಪ ಕಿತ್ತೂರ ಅವರ ತೋಟ ಅದೊಂದು ಕೃಷಿ ಪ್ರಯೋಗಾಲಯ. ಇಲ್ಲಿ ಕಿತ್ತೂರ ಕೃಷಿಯಲ್ಲಿ ನೂತನ ಪ್ರಯೋಗಗಳನ್ನು ಮಾಡುತ್ತ ಪ್ರತಿಯೊಂದರಲ್ಲೂ ಯಶಸ್ಸು ಸಾಧಿಸುತ್ತ ಹಲವಾರು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ.
ಧರೆಪ್ಪ ತಮ್ಮ ತೋಟದಲ್ಲಿ ಎರಡುವರೆ ದಶಕಗಳಿಂದ ತಮ್ಮ ತೋಟದಲ್ಲಿ ರಾಸಾಯನಿಕ ಗೊಬ್ಬರವನ್ನೆ ಬಳಸಿಲ್ಲ. ಕೇವಲ ದನಕರುಗಳ ಮೂತ್ರ, ಶೆಗಣಿ, ಗಿಡ ಮರಗಳ ಎಲೆಗಳನ್ನು ಬಳಸಿ ಗೊಬ್ಬರವನ್ನು ತಯಾರು ಮಾಡುತ್ತಿದ್ದಾರೆ. ಇನ್ನೂ ಸಸ್ಯಜನ್ಯ ಮತ್ತು ಪ್ರಾಣಿ ಜನ್ಯ ಕೀಟನಾಶಕಗಳನ್ನು ಕಾಲಕ್ಕೆ ತಕ್ಕಂತೆ ತಾವೇ ತಯಾರು ಮಾಡಿಕೊಂಡು ಬೆಳೆಗಳಿಗೆ ನೀಡುತ್ತಾ ಬಂದಿದ್ದಾರೆ.
ಈಗ ಧರೆಪ್ಪ ಕಿತ್ತೂರ ತಮ್ಮ ಒಂದು ಎಕರೆ ತೋಟದಲ್ಲಿ ಕಬ್ಬಿನ ಬೆಳೆಯ ಜೊತೆಗೆ ಅಂತರ ಬೆಳೆಯಾಗಿ 12 ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಬ್ಬು ಮುಖ್ಯ ಬೆಳೆಯಾದರೆ ಬಿಳಿ ಈರುಳ್ಳಿ, ಸಬಸ್ಸಗಿ, ಮೆಂತೆ, ಕೊತ್ತಂಬರಿ, ಪಾಲಕ, ಮೂಲಂಗಿ, ಮನಸಿನಕಾಯಿ, ಟೊಮೆಟೊ, ಬದನೆ, ಬೆಂಡಿ, ಚವಳಿ, ಬೀಟರೂಟ್ಗಳನ್ನು ಬೆಳೆಯುತ್ತಿದ್ದಾರೆ.
ಅವರು ಬೆಳೆಯುತ್ತಿರುವ ಹನ್ನೆರಡು ಬೆಳೆಗಳು ನಾಟಿ ಮಾಡಿದ 35 ದಿನಗಳ ನಂತರ ಇಳುವರಿಯನ್ನು ನೀಡಲು ಆರಂಭಿಸುತ್ತವೆ. ನಂತರ 120 ದಿನಗಳ ಕಾಲ ಸತತವಾಗಿ ಇಳುವರಿಯನ್ನು ನೀಡುತ್ತವೆ. ನಂತರ ಈ ಎಲ್ಲ ಬೆಳೆಗಳನ್ನು ತೆಗೆದು ಕೇವಲ ಕಬ್ಬಿನ ಬೆಳೆ ಮಾತ್ರ ಉಳಿಯುತ್ತದೆ. ಇನ್ನೂ ಮುಖ್ಯವಾಗಿ ತಾವು ಬೆಳೆದ ಬೆಳೆಗಳಿಗೆ ತಾವೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ, ಬಹಳಷ್ಟು ಮಾರಾಟಗಾರರು ಅವರ ತೋಟಕ್ಕೆ ಬಂದು ಖರೀದಿ ಮಾಡಿಕೊಂಡು ಹೋಗುತ್ತಾರೆ.
Related Articles
ಧರೆಪ್ಪ ಕಿತ್ತೂರ ಮೊಬೈಲ್ ಕೃಷಿ ವಿಶ್ವವಿದ್ಯಾಲಯವಿದ್ದಂತೆ. ಯಾವುದೆ ರೈತರು ಬೆಳೆಗಳ ಕುರಿತು ಮಾಹಿತಿಯನ್ನು ಕೇಳಿದಾಗ ಪ್ರತಿಯೊಂದು ಅಂಶವನ್ನು ಅವರಿಗೆ ತಿಳಿಸಿ ಸಹಾಯ ಮಾಡುತ್ತಾರೆ. ರಾಜ್ಯ ಮತ್ತು ಹೊರ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಅಧಿಕಾರಿಗಳು ಇವರ ತೋಟಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕೂಡಾ ಪಡೆದುಕೊಂಡು ಹೋಗುತ್ತಿದ್ದಾರೆ.
ಒಂದೇ ರೀತಿಯ ಬೆಳೆಗಳಿಗೆ ಅಂಟಿಕೊಳ್ಳದೆ ವೈವಿಧ್ಯಮಯವಾದ ಬೆಳೆಗಳನ್ನು ಬೆಳೆಯವುದರಿಂದ ನಿರಂತರವಾದ ಲಾಭವನ್ನು ಮಾಡಿಕೊಳ್ಳಲು ಸಾಧ್ಯ. ಇದರಿಂದಾಗಿ ರೈತರಿಗೆ ಹಣಕಾಸಿನ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಧರೆಪ್ಪ ಕಿತ್ತೂರ.
ಕಪ್ಪು ಅರಿಸಿನ ಬೆಳೆಯುತ್ತಿರುವು ರೈತ: ಧರೆಪ್ಪ ಕಿತ್ತೂರ ಸದ್ಯ ಈ ಭಾಗದಲ್ಲಿ ಕಪ್ಪು ಅರಿಸಿನ ಬೆಳೆದು ಗಮನ ಸೆಳೆದಿದ್ದಾರೆ. ಅವರು ಕಪ್ಪು ಅರಿಸಿನದ ಬೀಜಗಳನ್ನು ಹಿಮಾಚಲ ಪ್ರದೇಶದಿಂದ ತೆಗೆದುಕೊಂಡು ಬಂದು ಇಲ್ಲಿ ಬೆಳೆಯುತ್ತಿದ್ದಾರೆ. ಈಗ ಪ್ರಾಯೋಗಿಕವಾಗಿ ತಮ್ಮ ತೋಟದ ಹತ್ತು ಗುಂಟೆ ಪ್ರದೇಶದಲ್ಲಿ ಕಪ್ಪು ಅರಿಸಿನ ಬೆಳೆದು ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಅರಿಸಿನಿ ನೇರಳೆ ಇಲ್ಲವೆ ಬೂದು ಬಣ್ಣದ್ದಾಗಿರುತ್ತದೆ. ಇದನ್ನು ಸಂಸ್ಕರಿಸಿದ ನಂತರ ಕಪ್ಪು ಬಣ್ಣದ್ದಾಗುತ್ತದೆ.
ಹಳದಿ ಬಣ್ಣದ ಅರಿಸಿನ ಬೆಳೆಯಲು ಒಂಭತ್ತು ತಿಂಗಳು ಬೇಕಾದರೆ ಕಪ್ಪು ಅರಿಸಿನವು ಕೇವಲ ಆರು ತಿಂಗಳ ಬೆಳೆಯಾಗಿದೆ ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವಂತಹ ಅರಿಸಿನವಾಗಿದೆ.
ಇದು ಮುಖ್ಯವಾಗಿ ಔಷಧೀಯ ಗುಣವುಳ್ಳ ಅರಿಸಿನವಾಗಿರುವುದರಿಂದ ಭಾರಿ ಬೇಡಿಕೆ ಇದೆ. ಜನರು ಇನ್ನೂ ಹಸಿಯಾಗಿರುವ ಅರಿಸಿನ ಬೀಜಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಅರಿಸಿನ ಅಂದಾಜು ರೂ. ನಾಲ್ಕು ಸಾವಿರಕ್ಕೆ ಒಂದು ಕೆ.ಜಿ. ಯಂತೆ ಮಾರಾಟವಾಗುತ್ತಿದೆ. ಹತ್ತು ಗುಂಟೆ ಪ್ರದೇಶದಲ್ಲಿ ಎರಡು ಕ್ವಿಂಟಲದಷ್ಟು ಅರಿಸಿನ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನೇ ಇನ್ನಷ್ಟು ಬೆಳೆಯುವ ಚಿಂತನೆಯಲ್ಲಿದ್ದಾರೆ.
– ಕಿರಣ ಶ್ರೀಶೈಲ ಆಳಗಿ