ರಬಕವಿ-ಬನಹಟ್ಟಿ: ಬಾಗಲಕೋಟೆ ಕುಡಚಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲಾದ ಜಮೀನುಗಳ ಮಾಲೀಕರಿಗೆ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಪರಿಹಾರ ಧನವನ್ನು ಅವರ ಗ್ರಾಮಕ್ಕೆ ತೆರಳಿ ವಿತರಣೆ ಮಾಡಲಾಗುತ್ತಿದೆ. ನಾವಲಗಿ ಗ್ರಾಮದ 111 ಭೂ ಮಲೀಕರಲ್ಲಿ 67 ಜನ ಭೂಮಾಲೀಕರಿಗೆ ರೂ. 14,06,60,208 ವಿತರಣೆ ಮಾಡಲಾಗುತ್ತಿದ್ದು, ಪರಿಹಾರ ಧನವು ಗುರುವಾರದೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದರು.
ಸಮೀಪದ ನಾವಲಗಿ ಗ್ರಾಮದಲ್ಲಿ ಭೂಸ್ವಾಧೀನ ಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ ಪರಿಹಾರ ಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿ ನೀಡಿದ ಮಾಲೀಕರು ಕಚೇರಿಗೆ ಅಲೆಯದಂತೆ ಅವರ ಗ್ರಾಮಕ್ಕೆ ತೆರಳಿ ಪರಿಹಾರ ಧನವನ್ನು ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಜಮಖಂಡಿ ತಾಲ್ಲೂಕಿನ ಹುಲ್ಯಾಳ, ಸಿದ್ದಾಪುರ, ಜಾಲಿವೇರಿ, ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ, ಹೊಸೂರ, ತೇರದಾಳ ಮತ್ತು ಅಂದಾಜು ರೂ. 36 ಕೋಟಿಯಷ್ಟು ಪರಿಹಾರ ಧನ ವಿತರಣೆ ಮಾಡಲಾಗಿದೆ. ಇನ್ನೂ ಬಹಳಷ್ಟು ಭೂಮಾಲೀಕರಿಗೆ ಪರಿಹಾರ ಧನವನ್ನು ವಿತರಣೆ ಮಾಡಬೇಕಾಗಿದ್ದು, ಅಂಥ ರೈತರು ಆದಷ್ಟು ಬೇಗನೆ ಸಂಬಂಧಪಟ್ಟ ಕಾರ್ಯಾಲಯಗಳಿಗೆ ಸೂಕ್ತ ದಾಖಲೆಗಳನ್ನು ನೀಡಬೇಕು.
ಭೂ ಸ್ವಾಧೀನಕ್ಕೆ ಸಂಬಂಧಪಟ್ಟ ಯಾವುದೆ ಸಮಸ್ಯೆಗಳಿದ್ದರೆ ಜಮಖಂಡಿ ಉಪವಿಭಾಗಾಧಿಕಾರಿ ಕಾರ್ಯಲಯದಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದರು.
ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಮಾತನಾಡಿ, ಭೂಸ್ವಾಧೀನದ ಎರಡನೆಯ ಹಂತದಲ್ಲಿ 7 ಗ್ರಾಮಗಳಲ್ಲಿ ಜನೆವರಿ 16 ರಿಂದ ಪರಿಹಾರ ಧನ ವಿತರಣೆ ಕಾರ್ಯವನ್ನು ನಡೆಸಲಾಗುತ್ತಿದೆ. ಜಂಟಿ ಸರ್ವೆ ಕಾರ್ಯವನ್ನು ನೆರವೇರಿಸಿದ ನಂತರ ಪರಿಹಾರ ಧನವನ್ನು ವಿತರಣೆ ಮಾಡಲಾಗುತ್ತಿದೆ. ರೈಲು ಮಾರ್ಗದ ಸಂದರ್ಭದಲ್ಲಿ ತೋಟ ಮತ್ತು ಹೊಲಗಳಿಗೆ ನೀರು ಪೂರೈಕೆ ಮಾಡುವ ಪೈಪ್ ಮತ್ತು ರಸ್ತೆ ನಿರ್ಮಾಣಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ರೈತರಿಗೆ ತೊಂದರೆಯಾಗದಂತೆ ಆದಷ್ಟು ಬೇಗನೆ ಪರಿಹಾರ ಧನ ನೀಡುವ ನಿಟ್ಟಿನಲ್ಲಿ ರೈತರ ಬಹುತೇಕ ದಾಖಲೆಗಳನ್ನು ಇಲಾಖೆಯು ಪಡೆದುಕೊಂಡು ಪರಿಹಾರ ಧನವನ್ನು ನೀಡುತ್ತಿದೆ. ಭೂಮಿ ಕಳೆದುಕೊಂಡ ರೈತರ ಇಡುಗಂಟು ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಭೂ ಸ್ವಾಧೀನಕ್ಕೆ ಮತ್ತು ಪರಿಹಾರಕ್ಕೆ ಸಂಬಂಧಪಟ್ಟ ಯಾವುದೆ ಸಮಸ್ಯೆಗಳು ಮತ್ತು ತೊಂದರೆಗಳು ಇದ್ದರೆ ಜಮಖಂಡಿಯ ಉಪವಿಭಾಗಾಧಿಕಾರಿ ಕಾರ್ಯಲಯಕ್ಕೆ ಬಂದರೆ ಮುಕ್ತ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.
ರಬಕವಿ-ಬನಹಟ್ಟಿ ತಹಶೀಲ್ದಾರ್ ಡಾ.ದೊಡ್ಡಪ್ಪ ಹೂಗಾರ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಶಿರಸ್ತೆದಾರ ಎನ್.ಬಿ.ಬಿರಡಿ, ಪ್ರಕಾಶ ಮಠಪತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಸ ಕಾಂತಿ, ಉಪಾಧ್ಯಕ್ಷೆ ಭಾಗೀರತಿ ಮಗದುಮ್, ಹನಮಂತ ಸವದಿ, ಆನಂದ ಕಂಪು, ದಾನಪ್ಪ ಆಸಂಗಿ, ರೇಖಾ ಕಾಂತಿ, ಮಹಾದೇವಿ ಸಂಗಾನಟ್ಟಿ, ಯಮನವ್ವ ಕಂಚು, ಈರಪ್ಪ ವಾಲಿ, ಮುತ್ತಪ್ಪ ಅಂಗಡಿ ಸೇರಿದಂತೆ ನಾವಲಗಿ ಗ್ರಾಮದ ರೈತರು ಇದ್ದರು.
ಇದನ್ನೂ ಓದಿ: ಒಂದು ವಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಬಿ.ಸಿ. ನಾಗೇಶ್