ಶ್ರೇಯಸ್ ನಾಯಕರಾಗಿರುವ “ರಾಣ’ ಚಿತ್ರ ನ.11 ರಂದು ತೆರೆ ಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್, ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಈಗ ಸಿನಿಮಾ ಸ್ಯಾಟ್ ಲೈಟ್‌ನಿಂದ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಹೊಸ ನಟರ ಸಿನಿಮಾಗಳಿಗೆ ದೊಡ್ಡ ಮೊತ್ತದ ಟಿವಿ ರೈಟ್ಸ್ ಸಿಗುವುದಿಲ್ಲ ಎಂಬ ಮಾತಿದೆ. ಆದರೆ, ಶ್ರೇಯಸ್ ವಿಚಾರದಲ್ಲಿ ಸುಳ್ಳಾಗಿದೆ. “ರಾಣ’ ಚಿತ್ರದ ಸ್ಯಾಟ್ ಲೈಟ್ ಹಕ್ಕು ಖಾಸಗಿ ವಾಹಿನಿಗೆ ಮೂರು ಕೋಟಿ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೂ ಬೇಡಿಕೆ ಬಂದಿದೆಯಂತೆ.
ಚಿತ್ರದ ಬಗ್ಗೆ ಹೇಳುವುದಾದರೆ, ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿ ರುವ ಅರ್ಧದಷ್ಟು ಮಂದಿ ಮೂಲತಃ ಬೆಂಗಳೂರಿನವರಾಗಿರುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದು ಬದುಕು ಕಟ್ಟಿಕೊಂಡವರು. ಇಂಥದ್ದೇ ಓರ್ವ ಹಳ್ಳಿ ಹುಡುಗ ಪೇಟೆಗೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಆಗ ಅವನಿಗೆ ಎದುರಾಗುವ ಸಮಸ್ಯೆಗಳು ಏನು? ಆತ ಹೇಗೆ ಕಷ್ಟಗಳನ್ನು ಮೆಟ್ಟಿನಿಲ್ಲುತ್ತಾನೆ ಎಂಬ ಸಾರಾಂಶದಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಗೆಳೆತನದ ಮಹತ್ವ ತೋರಿಸಲಾಗಿದೆ. ಗೆಳೆತನವೇ ಹೈಲೆಟ್ ಎಂಬುದು ಚಿತ್ರತಂಡದ ಮಾತು. “ರಾಣ’ ಒಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಚಿತ್ರ. ಆ್ಯಕ್ಷನ್, ಸೆಂಟಿಮೆಂಟ್, ಲವ್, ಫ್ರೆಂಡ್ ಶಿಪ್ ಕೂಡಿದ ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಇರುವ ಸಿನಿ ಮಾ ಎನ್ನುವುದು ಚಿತ್ರತಂಡದ ಮಾತು. ನಾಲ್ಕು ಆ್ಯಕ್ಷನ್, ನಾಲ್ಕು ಹಾಡುಗಳನ್ನು ಒಳಗೊಂಡಿರುವ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂಬ ಭರವಸೆ ಚಿತ್ರತಂಡದ್ದು. ಈ ಚಿತ್ರವನ್ನು ನಂದ ಕಿಶೋರ್ ನಿರ್ದೇಶಿಸಿದ್ದು, ಪುರುಷೋತ್ತಮ್ ಗುಜ್ಜಾಲ್ ನಿರ್ಮಿಸಿದ್ದಾರೆ.