ಮಂಗಳೂರು: ಮಂಗಳೂರು ಹೊರವಲಯದ ಪಾವೂರು ಮತ್ತು ಅಡ್ಯಾರ್ ನೇತ್ರಾವತಿ ನದಿ ಮಧ್ಯದ ಪಾವೂರು ಉಳಿಯ ಕುದ್ರುವಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ರಾಷ್ಟ್ರೀಯ ಹಸುರು ಪ್ರಾಧಿಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಒಎ ಸಂಖ್ಯೆ 1007/2024ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಸೋಮವಾರ ಒಂದು ಹಂತದ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ಜನವರಿ ತಿಂಗಳಿಗೆ ಮುಂದೂಡಲಾಗಿದೆ. ಈ ನಡುವೆ ಪ್ರಕರಣವನ್ನು ದಕ್ಷಿಣ ವಲಯಕ್ಕೆ ವರ್ಗಾಯಿಸಲಾಗಿದೆ.
ದಿಲ್ಲಿಯ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು 2020ರಲ್ಲಿ ಮಾನಿಟರಿಂಗ್ ಆ್ಯಂಡ್ ಎನ್‌ಫೋರ್ಸ್‌ಮೆಂಟ್ ಗೈಡ್‌ಲೈನ್ಸ್ ಫಾರ್ ಸ್ಯಾಂಡ್ ಮೈನಿಂಗ್ ಬಗ್ಗೆ ಆದೇಶ ಹೊರಡಿಸಿದೆ. ರಾಜ್ಯ ಸರಕಾರದ ಗಣಿ ಇಲಾಖೆ ಅದನ್ನು ಪಾಲಿಸಿಕೊಂಡು ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಆದರೆ ನಿಯಮ ಉಲ್ಲಂಘನೆಯಾಗುತ್ತಿರುವುದು ಪದೇಪದೆ ಸಾಬೀತಾಗುತ್ತಿದ್ದು, ಈಗ ಉಳಿಯ ಪ್ರಕರಣ ರಾಷ್ಟ್ರೀಯ ಹಸುರು ಪ್ರಾಧಿಕಾರ ಮುಂದೆ ವಿಚಾರಣೆಗೆ ಬಂದಿದೆ.
ಉದಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು
ಕುದ್ರು ದ್ವೀಪದ ಭೂಭಾಗವನ್ನೇ ಬಗೆದು ಮರಳುಗಾರಿಕೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು. ಈ ಬಗ್ಗೆ ಜೂ. 25ರಂದು “ಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು’ ಎಂಬುದಾಗಿ ಉದಯವಾಣಿ ವರದಿ ಪ್ರಕಟಿಸಿತ್ತು.